ಕೋಟ: ಕಾರಂತರು ಅತ್ಯಂತ ವಿರಳವಾಗಿ ಕಾಣಸಿಗುವ ಶ್ರೇಷ್ಠಮತಿಯ ವ್ಯಕ್ತಿ. ಸಾಹಿತಿಯಾಗಿ ಚಿಂತಕರಾಗಿ ಕನ್ನಡ ಸಾಹಿತ್ಯದ ಹರಿವಿನ ವಿನ್ಯಾಸವನ್ನು ಬದಲಾಯಿಸಿದವರು. ಕನ್ನಡದ ಪ್ರಜ್ಞೆಯನ್ನು ಅಸಾಧರಣವಾಗಿ ವಿಸ್ತರಿಸಿದವರು. ಮುಖ್ಯವಾಗಿ ಕಾದಂಬರಿ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಾ ಬದುಕನ್ನು ಬೇರೆ ಬೇರೆ ಆಯಾಮಗಳಿಂದ ಬಗೆಯುವ ಆಲೋಚಿಸುವ ಮತ್ತು ಕಲಾತ್ಮಕವಾಗಿ ನಿರೂಪಿಸುವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಿಕೊಂಡು ಬಂದಿರುವ ಕಾರಂತರು ವ್ಯಕ್ತಿಯಲ್ಲ ಒಂದು ವಿದ್ಯಾಮಾನ ಎಂದು ಖ್ಯಾತ ವಾಗ್ಮಿ, ಚಿಂತಕರಾದ ಕೃಷ್ಣೇಗೌಡ ಮೈಸೂರು ಹೇಳಿದರು.
ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್(ರಿ.)ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17 ನೇ ವರುಷದ ಸಂಭ್ರಮದ ಸಾಹ್ಯಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ- 2021 (ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ಐದನೇ ದಿನದ ನುಡಿ ಚೇತನದಲ್ಲಿ ಮಾತನಾಡುತ್ತಿದ್ದರು.
ಭಾಷೆ ಎನ್ನುವುದು ಕೇವಲ ತಮಗೆ ಅನ್ನಿಸುವುದನ್ನು ಹೇಳುವ ವಸ್ತುವಾಗಿರದೆ ನಮ್ಮ ಪರಂಪರೆಯಲ್ಲಿರುವ ಎಲ್ಲಾ ಜ್ಞಾನವು ಭಾಷೆಯಲ್ಲಿ ಅಡಕವಾಗಿದೆ. ಭಾಷೆ ನಮ್ಮ ಬದುಕನ್ನು ಬದಲಾಯಿಸುವ ಸಂಗತಿ, ಅಲ್ಲದೇ ಅದು ಒಂದು ನಮ್ಮೊಳಗಿನ ಸಂಪತ್ತು. ಕನ್ನಡ ಭಾಷೆಗೆ ಒಂದು ಅನನ್ಯವಾದ ತೇಜಸ್ಸಿದೆ, ಶಕ್ತಿಯಿದೆ. ಭಾಷೆಯ ಅರ್ಥಪೂರ್ಣ ಬಳಕೆಯೇ ಅದರ ಬೆಳವಣಿಗೆ ಸಾಧ್ಯ ಎಂದರು
ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಪಿಸಿದರು.