ಮಂಗಳೂರು: (ಉಡುಪಿ ಬುಲೆಟಿನ್ ವಿಶೇಷ ವರದಿ) ರಜಾದಿನಗಳನ್ನು ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತಾರೆ. ಕೆಲವು ಮಂದಿ ಕಂಪ್ಯೂಟರ್ ಶಿಕ್ಷಣ ಪಡೆಯಲು ರಜಾದಿನಗಳನ್ನು ಉಪಯೋಗಿಸಿದರೆ ಇನ್ನೂ ಕೆಲವರು ಸಂಬಂಧಿಕರ ಮನೆಗೆ ತೆರಳುತ್ತಾರೆ. ಇಲ್ಲೊಬ್ಬರು ತನ್ನ ರಜಾ ದಿನವನ್ನು ಅವಿಸ್ಮರಣೀಯವನ್ನಾಗಿಸಿದ್ದಾರೆ.
ಬೈಕ್ ಮೂಲಕ ಏಕಾಂಗಿ ಸಂಚಾರವನ್ನು ಮಾಡಿ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಹೋದಲೆಲ್ಲಾ ವಿಚಾರ ಮುಟ್ಟಿಸಿ ಬರೋಬ್ಬರಿ 10 ರಾಜ್ಯಗಳಿಗೆ ಭೇಟಿ ನೀಡಿ, ಸುಮಾರು ಏಳು ಸಾವಿರ ಕಿಮೀಕ್ಕಿಂತ ಹೆಚ್ಚು ದೂರ ಸಂಚರಿಸಿ 21 ದಿನಗಳ ಬೈಕ್ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ವಿಶ್ವತ್ ಪಿ. ಭಟ್ ಸೆಪ್ಟೆಂಬರ್ 28 ರಂದು ಒಂದಿಷ್ಟು ಕನಸುಗಳನ್ನು ಹೊತ್ತುಕೊಂಡು ಅದಮ್ಯ ಆತ್ಮವಿಶ್ವಾಸದೊಂದಿಗೆ ಬೈಕ್ ಯಾತ್ರೆಯನ್ನು ಮಂಗಳೂರಿನಿಂದ ಆರಂಭಿಸಿ, ಅಕ್ಟೋಬರ್ 18 ರಂದು ಜಮ್ಮು ಕಾಶ್ಮೀರದ ಲಡಾಖ್ ನಲ್ಲಿ ಯಾತ್ರೆ ಪೂರ್ಣಗೊಳಿಸಿದರು. ಮಾರ್ಗ ಮಧ್ಯದಲ್ಲಿ ವಿಶ್ವತ್ 10 ರಾಜ್ಯಗಳಿಗೆ ಭೇಟಿ ನೀಡಿದರು.
ಅಲ್ಲಿಯ ಸಂಸ್ಕೃತಿ, ಜೀವನಶೈಲಿ, ಆಹಾರ ಪದ್ಧತಿಯ ಬಗ್ಗೆ ತಿಳಿಯಲು ಅವಕಾಶ ದೊರೆಯಿತು. ತುಳುನಾಡಿನ ಸಂಸ್ಕೃತಿಯ ಬಗ್ಗೆಯೂ ಅಲ್ಲಿನವರಿಗೆ ಒಂದಿಷ್ಟು ಪರಿಚಯಿಸಲು ಸಾಧ್ಯವಾಯಿತು. ಒಟ್ಟಿನಲ್ಲಿ ಯಾತ್ರೆ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು ವಿಶ್ವತ್. ಲಡಾಖ್ ನಿಂದ ವಾಪಾಸು ಮಂಗಳೂರಿಗೆ ಬೈಕ್ ನಲ್ಲೇ ಬರ್ತಿದ್ದೇನೆ ಎಂದು ವಿಶ್ವತ್ ತನ್ನ ಅನುಭವ ಹಂಚಿಕೊಂಡರು.