ಶಿರ್ವ: ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಗ್ರೀನ್ ಟೀಚರ್ ಫೋರಂ, ಎನ್.ಸಿ.ಸಿ, ಎನ್. ಎಸ್.ಎಸ್, ಯೂತ್ ರೆಡ್ ಕ್ರಾಸ್ ಮತ್ತು ರೋವರ್ಸ-ರೇಂಜರ್ಸ್ ಸಂಯುಕ್ತ ಆಶ್ರಯದಲ್ಲಿ ‘ಹಸಿರಿನಿಂದ ಉಸಿರು’ ವನಮಹೋತ್ಸವ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ಗುರುವಾರ ನಡೆಯಿತು. ಫಲ ನೀಡುವ ಗಿಡಗಳನ್ನು ನೆಡುವ ಮೂಲಕ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕ ಅ. ವಂ. ಧರ್ಮಗುರುಗಳಾದ ಡೆನ್ನಿಸ್ ಅಲೆಕ್ಸಾಂಡರ್ ಡೇಸ ರವರು ಸಾಂಕೇತಿಕವಾಗಿ ಚಾಲನೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡುತ್ತಾ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಎಲ್ಲಾ ಅಧ್ಯಾಪಕ ಅಧ್ಯಾಪಕೇತರ ಸಿಬ್ಬಂದಿ ವರ್ಗದವರಿಗೆ ಪರಿಸರ ಕಾಳಜಿ ಮತ್ತು ಅದರ ಪ್ರಾಮುಖ್ಯತೆ ತಿಳಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ಎನ್.ಎಸ್.ಎಸ್ ಅಧಿಕಾರಿ ರಕ್ಷಾ, ರೇಂಜರ್ಸ್ ಲೀಡರ್ ಗಳಾದ ಸಂಗೀತ ಪೂಜಾರಿ, ರೆಡ್‍ಕ್ರಾಸ್ ಘಟಕದ ಮುರಳಿ, ಬೋಧಕ ಬೋಧಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಮತ್ತು ಗ್ರೀನ್ ಟೀಚರ್ ಫೋರಂನ ಸಂಯೋಜಕಿ ಯಶೋದಾ ಸ್ವಾಗತಿಸಿ, ಎನ್.ಎಸ್.ಎಸ್. ಅಧಿಕಾರಿ ಪ್ರೇಮನಾಥ ವಂದಿಸಿದರು. ರೋವರ್ಸ್ ಸ್ಕೌಟ್ ಲೀಡರ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.