ಉಡುಪಿ, ಮಾ.10: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಉಡುಪಿಯ ಪಾಂಡುರಂಗ ಶಾನುಭಾಗರು ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಸಮೀಪದಲ್ಲಿ ಹೃದಯಾಘಾತದಿಂದ ನಿಧನರಾದರು. ಬೆಳಿಗ್ಗೆ ರಾಮನ ದರ್ಶನ ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿ ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ಸಂತೋಷದಿಂದ ತೆರಳಿದ್ದರು. ಅಪರಾಹ್ನದ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ಅವರಿಗೆ ಹೃದಯಾಘಾತವಾಗಿದೆ. ಸಮೀಪವರ್ತಿಗಳು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ದೈಹಿಕ ಅಂಧತ್ವವಿದ್ದರೂ ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗರು ಅಪೂರ್ವ ಚಿಂತಕರೂ ಆಗಿದ್ದರು.
ಬೆಳಿಗ್ಗೆ ಶಾನಾಭಾಗರಿಗೆ ಸಂತೋಷದಿಂದ ತೀರ್ಥಪ್ರಸಾದ ನೀಡಿ ಸಂಸ್ಕೃತ ದಲ್ಲೇ ಸಂಭಾಷಣೆ ನಡೆಸಿ ಕುಶಲೋಪರಿ ನಡೆಸಿದ್ದ ಪೇಜಾವರ ಶ್ರೀಗಳು ಈ ಸುದ್ದಿ ತಿಳಿದು ಆಘಾತ ವ್ಯಕ್ತಪಡಿಸಿದ್ದು ಅವರ ಆತ್ಮಕ್ಕೆ ರಾಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.