ಉಡುಪಿ: ಹಿರಿಯ ನಾಗರಿಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ವಯೋಮಾನಕ್ಕೆ ತಕ್ಕ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಯುವಕರಿಗೆ ಸ್ಪೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹೇಳಿದರು.
ಅವರು ಇಂದು ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಶ್ವ ಹಿರಿಯ ನಾಗರಿಕ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಹಿರಿಯ ನಾಗರಿಕರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮದಲ್ಲಿ ವಿಕೆಟ್‌ಗೆ ರಿಂಗ್ ಹಾಕುವ ಮೂಲಕ ಚಾಲನೆ ನೀಡಿದರು.
ಕ್ರೀಡೆಯಲ್ಲಿ ಭಾಗವಹಿಸಲು ವಯಸ್ಸಿನ ಯಾವುದೇ ನಿರ್ಭಂಧವಿಲ್ಲ. ಕ್ರೀಯಾಶೀಲ ಮನಸ್ಸು ಮತ್ತು ಆರೋಗ್ಯಯುತ ದೇಹವನ್ನು ಉತ್ತಮವಾಗಿರಿಸಿಕೊಳ್ಳಲು ಹಿರಿಯ ನಾಗರೀಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕೊರೋನಾ ಸಂಕಷ್ಟದ ಸಂದಿಗ್ಧತೆಯಲ್ಲಿ ಹಿರಿಯ ನಾಗರಿಕರು ಆರೋಗ್ಯದ ದೃಷ್ಠಿಯಿಂದ ಹೊರಗೆ ಬಾರದೇ ಸಂಕಷ್ಟದ ಪರಿಸ್ಥಿತಿಯನ್ನು ಅನುಭವಿಸಬೇಕಾಯಿತು. ಆದ್ದರಿಂದ ಈಗ ಅದನ್ನೆಲ್ಲವನ್ನು ತೊಡೆದು ಮತ್ತೆ ಯುವ ಜನಾಂಗಕ್ಕೆ ಹೊಸ ಚೈತನ್ಯದ ಸಂದೇಶ ಸಾರುವಂತೆ ಕ್ರೀಡೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು ಎಂದರು.
ಬಹುಮಾನ ಮತ್ತು ಪ್ರಶಸ್ತಿಯನ್ನು ಗೆಲ್ಲಲೇಬೇಕು ಎಂಬ ಮನೋಭಾವದ ಬದಲು ಮನೋಲ್ಲಾಸಕ್ಕಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ತೊಡಗುವುದರೊಂದಿಗೆ ಉಡುಪಿ ಜಿಲ್ಲೆಯ ಹಿರಿಯ ನಾಗರೀಕರು ರಾಜ್ಯದ ಇತರೆ ಜಿಲ್ಲೆಗಳಿಗೂ ಮಾದರಿಯಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹೊಂದಲು ಕ್ರೀಡಾ ಚಟುವಟಿಕೆ ಅತ್ಯವಶ್ಯಕವಾಗಿ ಅಳಡಿಸಿಕೊಳ್ಳಬೇಕು. ಸೇವೆಯಿಂದ ನಿವೃತ್ತಿ ಹೊಂದಿದ ಹಾಗೂ ಇತರ ಹಿರಿಯ ನಾಗರಿಕರು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಖುಷಿಯಿಂದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರೊಂದಿಗೆ ಕ್ರೀಡೆಗೆ ಹೊಸ ಮೆರುಗು ನೀಡಬೇಕು ಎಂದರು.
ಕ್ರೀಡಾಕೂಟದಲ್ಲಿ 60 ರಿಂದ 80 ವಯೋಮಾನದ ಹಿರಿಯ ನಾಗರಿಕರು (ಪುರುಷ ಮತ್ತು ಮಹಿಳೆಯರು) ಪ್ರತ್ಯೇಕವಾಗಿ ಕಾಲ್ನಡಿಗೆ, ವಿಕೆಟ್‌ಗೆ ರಿಂಗ್ ಹಾಕುವುದು, ಕೇರಂ, ಚಿತ್ರಕಲೆ, ಗಾಯನ ಹಾಗೂ ಏಕಪಾತ್ರ ಅಭಿನಯ ಸ್ಪರ್ಧೆಗಳಲ್ಲಿ ಸಕ್ರೀಯವಾಗಿ ಭಾಗವಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರತ್ನಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ, ಉಡುಪಿ ಹಿರಿಯ ನಾಗರಿಕ ಒಕ್ಕೂಟದ ಅಧ್ಯಕ್ಷ ಸಿ.ಎಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು.