ಕಾರ್ಕಳ: ಜಿಲ್ಲಾ ಪಂಚಾಯತ್ ಉಡುಪಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ತಾಲೂಕು ಪಂಚಾಯತ್ ಕಾರ್ಕಳ ಮತ್ತು ರುಡ್ ಸೆಟಿ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬ್ರಹ್ಮಾವರ ಇವರ ಸಹಯೋಗದೊಂದಿಗೆ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಮತ್ತು ಎಚ್ಐವಿ ಸೋಂಕಿತ ಮಹಿಳೆಯರಿಗೆ ಹತ್ತು ದಿನಗಳ ಉಚಿತ ಫೈಲ್, ಪೇಪರ್ ಬ್ಯಾಗ್, ಹಾಗೂ ಅಡಿಕೆ ಹಾಳೆ ತಟ್ಟೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ತರಬೇತಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಉದ್ಘಾಟಿಸಿದರು. ಬಳಿಕ ಮಾತನಾಅಡಿದ ಅವರು, ಸಮಾಜದಲ್ಲಿ ಶೋಷಿತ ಸಮುದಾಯದ ಜನರು ಸ್ವಉದ್ಯೋಗದ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಕಾರ್ಯಕ್ರಮದ ನಂತರ ಸ್ವಉದ್ಯೋಗ ಘಟಕ ಪ್ರಾರಂಭಿಸಲು ಜಿಲ್ಲಾ ಪಂಚಾಯಿತ್ ನಿಂದ ಸೂಕ್ತ ನೆರವು ಹಾಗೂ ಮಾರ್ಗದರ್ಶನ ನೀಡಲಾಗುವುದು ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಕಛೇರಿಗಳಿಗೆ ಸರ್ಕಾರಿ ಕಛೇರಿಗಳಿಗೆ ಸದರಿ ಘಟಕದಿಂದ ಫೈಲ್ ಗಳನ್ನು ಖರೀದಿಗೆ ಕ್ರಮ ವಹಿಸಬಹುದಾಗಿದೆ.
ಎಲ್ಲಾ ಅಭ್ಯರ್ಥಿಗಳು ಆಸಕ್ತಿಯಿಂದ ತರಬೇತಿ ಪಡೆದುಕೊಂಡು ಸ್ವ ಉದ್ಯೋಗ ಘಟಕ ಪ್ರಾರಂಭಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಬೇಕು ಎಂದು ತಿಳಿಸಿದರು. ಈ ವಿಶೇಷ ವರ್ಗಗಳಲ್ಲಿ ಇನ್ನಷ್ಟು ಮಂದಿ ಸ್ವಉದ್ಯೋಗದ ಬಗ್ಗೆ ಆಸಕ್ತಿ ಹೊಂದಿದ್ದಲ್ಲಿ ಅವರಿಗೂ ಸಹ ತರಬೇತಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ರುಟ್ ಸೆಟಿ ಸಂಸ್ಥೆಯ ನಿರ್ದೇಶಕರಾದ ಪಾಪ ನಾಯಕ್ ರವರು ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಎಚ್ಐವಿ ಸೋಂಕಿತ ಮಹಿಳೆಯರು ಹತ್ತು ದಿನದ ತರಬೇತಿಯನ್ನು ಅತ್ಯಂತ ಆಸಕ್ತಿಯಿಂದ ಪಡೆದು ಹಾಗೂ ಉದ್ಯೋಗ ಕೈಗೊಂಡು ಇತರಿಗೆ ಮಾರ್ಗದರ್ಶಕರಾಗಬೇಕು ಎಂದು ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎನ್ ಗುರುದತ್ತ್, ಜಿಲ್ಲಾ ಪಂಚಾಯತ್ ನ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಆಸರೆ ಸಮುದಾಯ ಸಂಘಟನೆಯ ಅಧ್ಯಕ್ಷರಾದ ಸುದರ್ಶನ್, ದೀಪಜ್ಯೋತಿ ಸಂಸ್ಥೆಯ ಪ್ರತಿನಿಧಿಯಾದ ಶಾಂತಿ ಉಪಸ್ಥಿತರಿದ್ದರು.
ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಗಣೇಶ್ ಸ್ವಾಗತಿಸಿ, ಮರ್ವಿನ್ ವಂದಿಸಿದರು.