ಕಾಪು: ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ತೆಂಕ ಗ್ರಾಮ ಪಂಚಾಯತ್ ಮತ್ತು ಪ್ರಗತಿ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಗ್ರಾಮದ ಮಹಿಳೆಯರಿಗಾಗಿ ಹಮ್ಮಿಕೊಂಡ 10 ದಿನಗಳ ಹಪ್ಪಳ ಉಪ್ಪಿನಕಾಯಿ ಮತ್ತು ಮಸಾಲಪುಡಿ ತಯಾರಿಕೆ ತರಬೇತಿಯ ಉದ್ಘಾಟನಾ ಸಮಾರಂಭವು ತೆಂಕ ಎರ್ಮಾಳಿನ ಬಿಲ್ಲವ ಭವನದಲ್ಲಿ ನಡೆಯಿತು.
ಸಮಾಜ ಸೇವಕ ಶಿವಪ್ರಸಾದ್ ಶೆಟ್ಟಿ ಇವರು ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಕಷ್ಟು ಅವಕಾಶಗಳಿವೆ. ಈ ತರಬೇತಿ ಕೂಡಾ ಒಂದು ಸದಾವಕಾಶವಾಗಿದ್ದು ಉತ್ತಮ ರೀತಿಯಲ್ಲಿ ಅವಕಾಶವನ್ನು ಉಪಯೋಗಿಸಿಕೊಳ್ಳಿ ಎಂದರು.
ತೆಂಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ಹರೀಶ್ ಕೋಟ್ಯಾನ್ ಮಾತನಾಡಿ, ಎಲ್ಲಾ ಮಹಿಳೆಯರು ತರಬೇತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮ ಮಾಹಿತಿಗಳನ್ನು ಪಡೆಯಿರಿ ಎಂದರು. ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ನಿರ್ದೇಶಕರಾದ ಸವಿತಾ ಎಸ್ ನಾಯಕ್ ತರಬೇತಿಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ, ಪಂಚಾಯತ್ ಸದಸ್ಯರಾದ ಅಮ್ಮಣ್ಣಿ, ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೇಯಾ, ಎನ್ಆರ್ ಎಲ್ ಎಮ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್, ಜಿಲ್ಲಾ ವ್ಯವಸ್ಥಾಪಕಿ ನವ್ಯ, ಪ್ರಗತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಆಶಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಕುಸುಮ ವಂದನಾರ್ಪಣೆಗೈದರು.