ಮಂಗಳೂರು: ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ಸಮಾಜಕಾರ್ಯ ವಿಭಾಗದ ಸಾರಥ್ಯ ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಹಿಂದೂ ಕುಷ್ಠ ನಿವಾರಣ್ ಸಂಘ ಮಂಗಳೂರು ಇದರ ಪ್ರಾಜೆಕ್ಟ್ ಮ್ಯಾನೇಜರ್ ನರೇಶ್ ಸಸಿಹಿತ್ಲು ಉದ್ಘಾಟನೆ ನೆರವೇರಿಸಿದರು. ಸಮಾಜಕಾರ್ಯ ಕೋರ್ಸಿನ ವಿಶೇಷತೆ ಮತ್ತು ಆಪ್ತ ಸಮಾಲೋಚನೆ ಬಗ್ಗೆ ವಿಸ್ತ್ರತವಾಗಿ ಮಾತನಾಡಿದರು. ಬದುಕಿನಲ್ಲಿ ನೂತನ ಅಧ್ಯಾಯವನ್ನು ತೆರೆಯುವ ಸಾಮರ್ಥ್ಯ ಸಮಾಜಕಾರ್ಯ ಕೋರ್ಸಿಗೆ ಇದೆ ಎಂದು ಅವರು ಒತ್ತಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನದಲ್ಲಿ ಶಿಸ್ತಿಗೆ ಆದ್ಯತೆ ನೀಡಿದರೆ ಗುರಿ ಸಾಧನೆಗೆ ಇಂಧನ ಸಿಕ್ಕಿದಂತಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕೌಶಲ್ಯಗಳನ್ನು ಮೈಗೂಡಿಸಿಕೊಂಡರೆ ಪರಿಣಾಮಕಾರಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ಉಪಪ್ರಾಂಶುಪಾಲ ಡಾ. ಜಯಕರ ಭಂಡಾರಿಯವರು ಮಾತನಾಡುತ್ತಾ, ನಾಲ್ಕು ಗೋಡೆಗಳ ಶಿಕ್ಷಣದಿಂದಾಚೆಗೆ ವಿದ್ಯಾರ್ಥಿಗಳು ತೆರೆದುಕೊಂಡರೆ ಮಾತ್ರ ಕೌಶಲ್ಯಗಳ ಅಭಿವೃದ್ಧಿಯಾಗುತ್ತದೆ. ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡರೆ ಗುರಿ ಸಾಧನೆ ಸುಲಭವಾಗುವುದು ಎಂದರು.
ಸ್ನಾತಕೋತ್ತರ ಸಂಯೋಜಕರಾದ ಡಾ. ಪ್ರಕಾಶಚಂದ್ರ ಶಿಶಿಲ ಅವರು ಮಾತನಾಡುತ್ತಾ, ಕ್ಷೇತ್ರಕಾರ್ಯದ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡಬಹುದು. ಸತ್ಪ್ರಜೆಗಳನ್ನು ನಿರ್ಮಿಸುವಲ್ಲಿ ಗ್ರಂಥಾಲಯದ ಕೊಡುಗೆ ಅನನ್ಯ ಎಂದರು.
ಸಮಾಜಕಾರ್ಯ ಸಂಯೋಜಕರಾದ ಡಾ. ಶೇಶಪ್ಪ ಕೆ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ಸಮಾಜಕಾರ್ಯ ಬೆಳೆದುಬಂದ ಹಾದಿಯ ಬಗ್ಗೆ ಬೆಳಕನ್ನು ಚೆಲ್ಲಿದರು.
ಸಮಾಜಕಾರ್ಯ ವಿಭಾಗ ಮುಖ್ಯಸ್ಥರಾದ ಪ್ರೊ. ಅರುಣಾಕುಮಾರಿಯವರು ಮಾತನಾಡುತ್ತಾ, ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಗಳೊಂದಿಗೆ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.
ಸಮಾಜಕಾರ್ಯ ಕೋರ್ಸಿನ ಸಮಗ್ರ ಮಾಹಿತಿಯನ್ನೊಳಗೊಂಡ ಭಿತ್ತಿಪತ್ರ ಹಾಗೂ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಾರಥ್ಯದ ನೂತನ ಪದಾಧಿಕಾರಿಗಳಿಗೆ ಸಾರಥ್ಯದ ಬೋಧಕ ಸಂಯೋಜಕ ಗಣೇಶ್ ಪ್ರಸಾದ್ ಪ್ರಮಾಣವಚನ ಬೋಧಿಸಿದರು. ಸಾರಥ್ಯದ ಬೋಧಕ ಸಂಯೋಜಕ ಗಣೇಶ್, ಸಮಾಜಕಾರ್ಯ ವಿಭಾಗದ ಉಪನ್ಯಾಸಕರು,
ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ಯಾರಲ್ ರಶ್ಮಿ ಸ್ವಾಗತಿಸಿ, ಮೋನಿಕ ವಂದಿಸಿದರು. ಅಶ್ವಿನಿ ಸಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.