ರಾಜ್ಯ ಸಾರಿಗೆ ಆಯುಕ್ತರ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಜಿಲ್ಲೆಯ ಎಲ್ಲಾ ಖಾಸಗಿ ಬಸ್ಸು, ಮ್ಯಾಕ್ಸಿಕ್ಯಾಬ್ ಹಾಗೂ ಟ್ಯಾಕ್ಸಿಗಳು ಮುಂಗಡ ತೆರಿಗೆ ಪಾವತಿಸಿ, ಅನುಪಯುಕ್ತತೆಯಿಂದ ಬಿಡುಗಡೆಗೊಳಿಸಿಕೊಂಡು ಮಾತ್ರ ವಾಹನವನ್ನು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆದೇಶಿಸಿರುತ್ತಾರೆ.
ಆದರೆ ಸೋಮವಾರದಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಚೇರಿಯ ಮೋಟಾರು ವಾಹನ ನಿರೀಕ್ಷಕರು, ನಿಯಮ ಉಲ್ಲಂಘಿಸಿ ವಾಹನ ತೆರಿಗೆ ಪಾವತಿಸದೇ, ಅದ್ಯರ್ಪಣಯಿಂದ ಬಿಡುಗಡೆಗೊಳಿಸಿಕೊಳ್ಳದೇ ಖಾಸಗಿ ಕಂಪೆನಿಯ ನೌಕರರನ್ನು ಸಾರ್ವಜನಿಕ ರಸ್ತೆಯ ಮೇಲೆ ಕೊಂಡೊಯ್ಯುತ್ತಿದ್ದ ಉಡುಪಿಯಿಂದ ಹೆಬ್ರಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು (ಕೆಎ-51/ ಬಿ 9646) ತಪಾಸಣೆ ನಡೆಸಿ, ವಾಹನವನ್ನು ಮುಟ್ಟುಗೋಲು ಹಾಕಿ, ಕಾನೂನು ರೀತಿಯ ಕ್ರಮ ಕೈಗೊಂಡು, ಮುಂದಿನ ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಒಪ್ಪಿಸಿರುತ್ತಾರೆ.
ಆದ್ದರಿಂದ ಅನಾವಶ್ಯಕವಾಗಿ ಸಾರ್ವಜನಿಕರಿಗೆ ತೊಂದರೆ ನೀಡದೇ, ಮುಂಗಡ ವಾಹನ ತೆರಿಗೆ ಪಾವತಿಯೊಂದಿಗೆ ಅದ್ಯರ್ಪಣದಿಂದ ಬಿಡುಗಡೆಗೊಳಿಸಿದ ನಂತರ ಮಾತ್ರ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಓಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಜೆ.ಪಿ ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.