ಉಡುಪಿ: ಚಂದು ಮೈದಾನ ಇಲ್ಲಿಯ ಜನವಸತಿ ಪರಿಸರದ ರಸ್ತೆಗಳಲ್ಲಿ ರಾತ್ರಿಯ ಸಮಯ ಮುಳ್ಳು ಹಂದಿಗಳ ಸಂಚಾರ ಇರುವುದನ್ನು ಸ್ಥಳೀಯರು ಗಮನಿಸಿದ್ದರು. ರಾತ್ರಿಯ ಸಮಯ ಸಾರ್ವಜನಿಕರು ರಸ್ತೆಗಳಲ್ಲಿ ಸಂಚರಿಸಲು ಆತಂಕ ಎದುರಿಸುತ್ತಿದ್ದರು. ಈ ಬಗ್ಗೆ ಪತ್ರಕರ್ತ ಸಂತೋಷ್ ಸರಳಬೆಟ್ಟು ಅವರು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಾಯವಾಣಿಗೆ ಮಾಹಿತಿ ನೀಡಿದ್ದರು.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮುಳ್ಳು ಹಂದಿಯ ಸಂಚರಿಸುವುದು ಕಂಡುಬಂದಿದೆ. ಸಂಚಾರ ಸ್ಥಳ ಗುರುತಿಸಿ, ಅರಣ್ಯ ಇಲಾಖೆ ಮತ್ತು ನಾಗರಿಕ ಸಮಿತಿಯ ಕಾರ್ಯಕರ್ತರು ಮುಳ್ಳು ಹಂದಿಯ ವಶಕ್ಕೆ ಪಡೆಯಲು, ಬೆಳಕಿನ ವ್ಯವಸ್ಥೆಯೊಂದಿಗೆ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಸುರೇಶ್ ಜಿ, ಅರಣ್ಯ ರಕ್ಷಕ ದೇವರಾಜ್ ಪಾಣ, ಸಿಬ್ಬಂದಿ ಜೋಯ್, ಹಾಗೂ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಭಾಗಿಯಾಗಿದ್ದರು.
ಗಾಢವಾದ ಕತ್ತಲು, ಮತ್ತು ಪೊದೆಗಳು ಬೆಳೆದಿರುವುದರಿಂದ ಕಾರ್ಯಾಚರಣೆಗೆ ಅಡಚಣೆ ಎದುರಾಯಿತು. ಮುಳ್ಳು ಹಂದಿ ಪೊದೆಗಳಲ್ಲಿ ಅವಿತುಕೊಂಡು ಕಾರ್ಯಾಚರಣೆ ವಿಫಲಗೊಳಿಸಿತು. ಕಾನನ ಪ್ರದೇಶದಲ್ಲಿ ಜೀವಿಸಬೇಕಾಗಿದ್ದ ವನ್ಯಜೀವಿಗಳು, ಆಹಾರದ ಕೊರತೆಯಿಂದಾಗಿ ಜನವಸತಿ ಪ್ರದೇಶಗಳಲ್ಲಿ ನೆಲೆ ಬಯಸಿವೆ. ಈ ಪ್ರದೇಶದಲ್ಲಿ ಹೆಬ್ಬಾವು, ಮುಳ್ಳು ಹಂದಿಗಳು ಗೋಚರಿಸುತ್ತಲೇ ಇರುತ್ತವೆ ಎಂದು ಸ್ಥಳೀಯರು ಹೇಳಿಕೊಂಡರು.