ಉಡುಪಿ: ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪುನಃಶ್ಚೇತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅಡಿಕೆ ಬೆಳೆ ಪ್ರದೇಶ ವಿಸ್ತರಣೆಯ ಬೇಡಿಕೆ ಹೆಚ್ಚಾಗಿ ಕಂಡುಬರುತ್ತಿರುವುದರಿಂದ, ಅಡಿಕೆ ಬೆಳೆಗೆ ಹೊಂದಿಕೊಂಡಂತೆ ಈಗಾಗಲೇ ಇರುವ 5 ರಿಂದ 6 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಅಡಿಕೆ ತೋಟಗಳಲ್ಲಿ ಹೆಚ್ಚುವರಿ ಆದಾಯ ಪಡೆಯಲು ಕಾಳುಮೆಣಸು ಬಳ್ಳಿಗಳ ನಾಟಿ ಕಾರ್ಯವನ್ನು ರೈತರು ಕೈಗೊಳ್ಳಲು ಅವಕಾಶವಿದ್ದು, ತೆಂಗಿನ ತೋಟವನ್ನು ಹೊಂದಿರುವ ರೈತರೂ ಸಹ ಕಾಳು ಮೆಣಸು ಬಳ್ಳಿ ನಾಟಿ ಕಾರ್ಯ ಕೈಗೊಳ್ಳಬಹುದಾಗಿರುತ್ತದೆ.
ಅಡಿಕೆಯಲ್ಲಿ ಕಾಳು ಮೆಣಸು ನಾಟಿಗೆ ಸಂಬಂಧಿಸಿದಂತೆ 107 ಮಾನವ ದಿನಗಳಲ್ಲಿ 30,885.20 ರೂ. ಕೂಲಿ ವೆಚ್ಚ, 21,020.40 ರೂ. ಸಾಮಾಗ್ರಿ ವೆಚ್ಚ ಸೇರಿದಂತೆ ಒಟ್ಟು 51,905.60 ರೂ. ಹಾಗೂ ತೆಂಗಿನಲ್ಲಿ ಕಾಳು ಮೆಣಸು ನಾಟಿ ಕಾರ್ಯಕ್ಕೆ 20 ಮಾನವ ದಿನಗಳಲ್ಲಿ 5,859.20 ರೂ. ಕೂಲಿ ವೆಚ್ಚ, 3,984.40 ರೂ ಸಾಮಾಗ್ರಿ ವೆಚ್ಚ ಸೇರಿದಂತೆ ಒಟ್ಟು 9,843.60 ರೂ. ಗಳಲ್ಲಿ ನಾಟಿ ಕಾರ್ಯ ಕೈಗೊಳ್ಳಬಹುದು.
ಪ್ರದೇಶ ವಿಸ್ತರಣೆಗೆ ಅವಶ್ಯವಿರುವ ಕಾಳುಮೆಣಸಿನ ಗಿಡಗಳು ಪ್ರತೀ ಗಿಡಕ್ಕೆ 5.5 ರೂ. ಗಳಿಗೆ ಲಭ್ಯವಿದ್ದು, ಆಸಕ್ತರು ಹತ್ತಿರದ ಗ್ರಾಮ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು ಉಡುಪಿ ದೂ.ಸಂಖ್ಯೆ:0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಉಡುಪಿ ದೂ.ಸಂಖ್ಯೆ: 0820-2522837, ಕುಂದಾಪುರ ದೂ.ಸಂಖ್ಯೆ: 08254-230813 ಹಾಗೂ ಕಾರ್ಕಳ ದೂ.ಸಂಖ್ಯೆ: 08258-230288 ಅನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.