ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರ ವಾಹನಗಳಿಗೆ ‘ಮಿಡಿಯಾ ಸ್ಟಿಕ್ಕರ್’ ವಿತರಣಾ ಕಾರ್ಯಕ್ರಮ ಮಂಗಳವಾರ ಉಡುಪಿಯ ಪತ್ರಿಕಾ ಭವನದಲ್ಲಿ ನಡೆಯಿತು.
ಸ್ಟಿಕ್ಕರ್ ಬಿಡುಗಡೆಗೊಳಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಮಾತನಾಡಿ, ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳನ್ನು ಬೇಧಿಸುವಲ್ಲಿ ಪತ್ರಕರ್ತರು ನೀಡಿದ ಮಾಹಿತಿಗಳು ಪೊಲೀಸ್ ಇಲಾಖೆಗೆ ಬಹಳಷ್ಟು ಸಹಕಾರಿಯಾಗಿದೆ. ಇದೇ ರೀತಿ ಪೊಲೀಸರಿಗೆ ಸಹಕಾರ ನೀಡುವ ಕಾರ್ಯ ಮುಂದುವರೆಯಬೇಕು.
ಪೊಲೀಸರು ಮತ್ತು ಪತ್ರಕರ್ತರು ಒಟ್ಟಿಗೆ ಕೆಲಸ ಮಾಡುವ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಾತನಾಡಿ, ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಪೊಲೀಸರು ಹಾಗೂ ಪತ್ರಕರ್ತರ ಪಾತ್ರ ಬಹಳಷ್ಟು ಪ್ರಮುಖವಾಗಿದೆ. ಈ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಸುಭಾಷ್ಚಂದ್ರ ವಾಗ್ಳೆ ಮತ್ತು ಹರಿಪ್ರಸಾದ್ ನಂದಳಿಕೆ ಹಾಗೂ ಪಿ.ಆರ್.ರಾಮಯ್ಯ ಪ್ರಶಸ್ತಿ ಪುರಸ್ಕೃತ ಯು.ಎಸ್.ಶೆಣೈ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಅಂಕಿತ್ ಶೆಟ್ಟಿ ಹಾಗೂ ಚೇತನ್ ಮಟಪಾಡಿ ಸಹಕರಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.