ಮಣಿಪಾಲ: ಜೀವನ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ಅಡಕವಾಗಿರುವ ಸೂಕ್ಷ್ಮತೆಯನ್ನು ಸೆರೆಹಿಡಿದಿರುವುದೇ ಷೇಕ್ಸ್‌ಪಿಯರ್‌ನ ಎಲ್ಲ ಕೃತಿಗಳ ಶ್ರೇಷ್ಠತೆ ಎಂದು ಖ್ಯಾತ ಬರಹಗಾರ ಮತ್ತು ರಂಗ ನಿರ್ದೇಶಕರಾದ ಎಸ್ ರಘುನಂದನ ನುಡಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ವೆಬಿನಾರ್ ನಲ್ಲಿ ಷೇಕ್ಸ್‌ಪಿಯರ್‌ನ ‘ರೋಮಿಯೋ, ಜೂಲಿಯೆಟ್ ಮ್ಯಾಕ್‌ಬೆತ್’ನ ಕುರಿತು ಮಾತನಾಡಿದರು.
ಶೇಕ್ಸ್‌ಪಿಯರ್ ಒರಟು – ಕೋಮಲ, ಕ್ರೂರ – ಸೌಮ್ಯ, ಲೋಲುಪತೆ – ಸಂತತ್ವ, ದೀನ – ಭವ್ಯ ದಂತಹ ನೂರಾರು ವ್ಯತಿರಿಕ್ತ ಪಾತ್ರಗಳನ್ನು ರಚಿಸಿ, ಅವುಗಳನ್ನು ಒಟ್ಟಿಗೆ ಬೆಸೆದು ಜೀವನದ ‘ವಾಸ್ತವ’ವನ್ನು ಸೆರೆಹಿಡಿಡಿದ್ದಾನೆ. ರೋಮಿಯೋ ಮತ್ತು ಜೂಲಿಯೆಟ್’ ಮತ್ತು ‘ಮ್ಯಾಕ್‌ಬೆತ್’ನ ನಾಟಕಗಳ ನಡುವೆ ಅಂತಹ ವ್ಯತಿರಿಕ್ತತೆಯನ್ನು ನಾವು ನೋಡಬಹುದು.
ರೋಮಿಯೋ ಮತ್ತು ಜೂಲಿಯೆಟ್‌ರನ್ನು ಪುರಾತನ ಪ್ರೇಮಿಗಳು ಮತ್ತು ಅಮರ ಪಾತ್ರಗಳು ಎಂದು ಬಣ್ಣಿಸಿದ ರಘುನಂದನ ಈ ಮೂಲ ಪಾತ್ರಗಳು ದೇಶಗಳು ಮತ್ತು ಭಾಷೆಗಳ ಗಡಿಯನ್ನು ಮೀರಿ, ನೂರಾರು ನಾಟಕಗಳು ಮತ್ತು ಚಲನಚಿತ್ರಗಳಲ್ಲಿ ರೂಪು ತಳೆದಿವೆ. ಮ್ಯಾಕ್‌ಬೆತ್ ನಮ್ಮೊಳಗಿನ ‘ದುಷ್ಟತ್ವದ’ ಜೊತೆಗೆ ವ್ಯವಹರಿಸುತ್ತದೆ ಎಂದು ಹೇಳಿದರು.
ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಎಲ್ಲಾ ಟೀಕೆಗಳ ಹೊರತಾಗಿಯೂ ಶೇಕ್ಸ್‌ಪಿಯರ್ ಕಾಲಗಳನ್ನೂ ಮೀರಿ ಸಮಕಾಲೀನ ಬರಹಗಾರನಾಗಿ ಉಳಿದಿದ್ದಾನೆ ಎಂದರು.
ಪ್ರೊ. ಮನು ಚಕ್ರವರ್ತಿ, ಪ್ರೊ. ಫಣಿರಾಜ್, ಭ್ರಮರಿ ಶಿವಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.