ಉಡುಪಿ: ಕಾರ್ಕಳ ತಾಲೂಕು ಮಟ್ಟದ ಶಿಕ್ಷಣ ಇಲಾಖೆಯ ಪ್ರೌಢಶಾಲೆಗಳ ಯೋಗಾಸನ ಸ್ಪರ್ಧೆಯು ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ಆತಿಥ್ಯದಲ್ಲಿ ಈ ನಡೆಯಿತು. ಶ್ರೇಷ್ಟಾ ಸಮೂಹ ಸಂಸ್ಥೆಗಳ ಉದ್ಯಮಿ ಆರ್. ಅನಂತಕೃಷ್ಣ ಶೆಣೈ ಅವರು ದೀಪ ಬೆಳಗಿಸಿ ಸ್ಪರ್ಧೆಯನ್ನು ಉದ್ಘಾಟನೆ ಮಾಡಿ ಯೋಗ ವಿಜ್ಞಾನವು ಜಗತ್ತಿನ ಅತ್ಯಂತ ಪುರಾತನ ವಿಜ್ಞಾನ ಆಗಿದ್ದು ಭಾರತದ್ದೇ ಬ್ರಾಂಡ್ ಹೊಂದಿದೆ.
ನಿತ್ಯ ಯೋಗವನ್ನು ಮಾಡುವುದರಿಂದ ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಿದೆ ಎಂದರು. ಉದ್ಯಮಿಗಳಾದ ನವೀನಚಂದ್ರ ಶೆಟ್ಟಿ, ಪ್ರೇಮಾನಂದ ಪೈ, ಪುರಸಭೆಯ ಸದಸ್ಯರಾದ ಪ್ರಭಾ, ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ರವಿಚಂದ್ರ ಕಾರಂತ, ಶಿಕ್ಷಣ ಸಂಯೋಜಕರಾದ ಸಂತೋಷ್ ಕುಮಾರ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮೋಹನ್ ಕಲಂಬಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಭಾಕರ್ ಜೈನ್, ಯಶೋಧಾ ಶೆಟ್ಟಿ, ರಾಮಕೃಷ್ಣ ಹೆಗಡೆ ಅವರು ಶುಭ ಕೋರಿದರು. ಭಾಗವಹಿಸಿದ ವಿವಿಧ ಪ್ರೌಢಶಾಲೆಗಳ ಯೋಗ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ ನಡೆಯಿತು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಉದ್ಯಮಿ ಬೋಳ ಅನುಪಮಾ ಕಾಮತ್ ಅವರು ಬಹುಮಾನ ವಿತರಣೆ ಮಾಡಿದರು. ಕಾರ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಬಾಲಕ ಮತ್ತು ಬಾಲಕಿಯರ ವಿಭಾಗಗಳ ಸಮಗ್ರ ಪ್ರಶಸ್ತಿಗಳನ್ನು ಪಡೆದವು. ಕಾಬೆಟ್ಟು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಅತಿಥಿಗಳನ್ನು ಸ್ವಾಗತಿಸಿ, ಸುಮಾಮಣಿ ಮತ್ತು ವಸಂತಿ ವೈ ಕಾರ್ಯಕ್ರಮ ನಿರೂಪಿಸಿದರು. ಶಾಂತಲಾ ವಂದಿಸಿದರು.