ಉಡುಪಿ: ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಬೀದಿ ಬದಿ ವ್ಯಾಪಾರಸ್ಥರು ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಕಿರು ಸಾಲ ಸೌಲಭ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಅವರು ನಗರದ ಅಜ್ಜರಕಾಡು ಪುರಭವನದಲ್ಲಿ, ಕಾರ್ಮಿಕ ಇಲಾಖೆ ಉಡುಪಿ ಜಿಲ್ಲೆ, ಉಡುಪಿ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ಬೆಂಗಳೂರು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಹಾಗೂ ಇ-ಶ್ರಮ್ ಯೋಜನೆಯ ನೋಂದಣಿ ಅಭಿಯಾನ ಹಾಗೂ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್‌ನಿಂದಾಗಿ ಎಲ್ಲಾ ವ್ಯವಹಾರ ಕ್ಷೇತ್ರಗಳಿಗೂ ಆರ್ಥಿಕವಾಗಿ ಪೆಟ್ಟು ಬಿದ್ದಿದ್ದು, ಬೀದಿ ಬದಿ ವ್ಯಾಪಾರಿಗಳು ಇದರಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಅಂತಹ ವ್ಯಾಪಾರಿಗಳಿಗೆ ಈ ಯೋಜನೆಯು ಬಹಳ ಪ್ರಾಮುಖ್ಯವಾಗಿದೆ ಎಂದರು. ಬೀದಿ ಬದಿ ವ್ಯಾಪಾರಿಗಳಿಗೆ ಪ್ರಥಮ ಹಂತದಲ್ಲಿ ಹತ್ತು ಸಾವಿರ ರೂ., ಎರಡನೇ ಹಂತದಲ್ಲಿ ಇಪ್ಪತ್ತು ಸಾವಿ ರೂ., ಮತ್ತು ಮೂರನೇ ಹಂತದಲ್ಲಿ ಐವತ್ತು ಸಾವಿರ ರೂ. ವರೆಗೆ ಶೇ.7 ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ಮೊದಲನೇ ಹಂತದ ಸಾಲವನ್ನು ಪಾವತಿಸಿದ್ದಲ್ಲಿ ಎರಡನೇ ಹಂತದ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದರು.
ಈ ಪ್ರಕ್ರಿಯೆಯು ನಿರಂತರವಾಗಿ ಮುಂದುವರಿದ್ದಲ್ಲಿ ವ್ಯಾಪಾರಿಗಳು ಕೂಡ ಉದ್ಯಮಿಗಳಾಗಬಹುದಾಗಿದ್ದು, ಇದರಿಂದ ದೇಶವು ಆರ್ಥಿಕವಾಗಿ ಪ್ರಗತಿ ಸಾಧಿಸಬಹುದಾಗಿದೆ ಎಂದರು. ಈ ಯೋಜನೆಯು 50 ಲಕ್ಷ ಫಲಾನುಭಿಗಳಾದ ನಂತರ ಕೊನೆಗೊಳ್ಳುತ್ತಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಸಹಕರಿಸಬೇಕು ಎಂದರು.
ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯನ್ನು ಪ್ರಾರಂಭಿಸಿದ್ದು, ಅಸಂಘಟಿತ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಸಾಲ ಸೌಲಭ್ಯ ಮಂಜೂರಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಶಾಸಕರು ವಿತರಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಕಾರ್ಮಿಕ ಇಲಾಖೆಯ ಅಧಿಕಾರಿ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ಬಾಲಕೃಷ್ಣ ಶೆಟ್ಟಿ, ಕೌನ್ಸಿಲರ್‌ಗಳಾದ ರಶ್ಮಿ ಸಿ ಭಟ್, ರಜನಿ ಹೆಬ್ಬಾರ್, ಮಾನಸ ಪೈ, ಹರೀಶ್ ಶೆಟ್ಟಿ, ಪ್ರಭಾಕರ ಪೂಜಾರಿ, ಸವಿತಾ ಹರೀಶ್ ರಾವ್, ಗಿರಿಧರ್ ಆಚಾರ್ಯ, ಅಶೋಕ್ ಟಿ.ಜೆ ಹೆಗ್ಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ಡಾ. ಉದಯ್ ಶೆಟ್ಟಿ ಸ್ವಾಗತಿಸಿದರು, ಸುಧಾಕರ ಪೆರಂಪಳ್ಳಿ ನಿರೂಪಿಸಿ, ವಂದಿಸಿದರು.