ಕೋಟ: ಕುಂದಾಪ್ರ ಭಾಷೆ ಈ ಭಾಗದ ಜನರ ಜೀವನಾಡಿಯಿದ್ದಂತೆ, ಅದನ್ನು ವಿಶ್ವದೆಲ್ಲೆಡೆ ಪಸರಿಸುವಂತಾಗಬೇಕು, ಇಲ್ಲಿನ ಆಚರಣೆ ಸಂಸ್ಕೃತಿ ತನ್ನದೇ ಆದ ಮಹತ್ವವನ್ನು ಹೊಂದಿದ್ದು ಇನ್ನಷ್ಟೂ ಈ ಭಾಷೆ ಸಮೃದ್ಧವಾಗಿ ಬೆಳೆಯಲಿ, ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕುಂದಾಪ್ರ ಭಾಷೆಯ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುವುದು ಅಲ್ಲದೇ ಕುಂದಾಪ್ರ ಭಾಷೆ ಅಕಾಡೆಮಿ ಸ್ಥಾಪಿಸಲು ಸರಕಾರವನ್ನು ಒತ್ತಾಯಿಸಲಾಗುವುದೆಂದು ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಹೇಳಿದರು.
ಅವರು ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಡಾ. ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಆಶ್ರಯದಲ್ಲಿ ಯು ಚಾನೆಲ್ ಸಹಯೋಗದಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಕುಂದಾಪ್ರ ಕನ್ನಡ ಉತ್ಸವ ಹಾಡಿಗೆ-ಹನ್ನೆರಡು ಕಬರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಉಡುಪಿ ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕಿ ಪೂರ್ಣಿಮ ಮಾತನಾಡಿ ಕುಂದಾಪ್ರ ಭಾಷೆಗೆ ಉಳಿದ ಭಾಷೆಗೆ ಸಿಕ್ಕ ಸ್ಥಾನಮಾನ ದೊರಕುವಂತಾಗಲಿ, ವಿಶ್ವ ಕುಂದಾಪ್ರ ದಿನಾಚರಣೆ ಮೂಲಕ ಇಲ್ಲಿನ ಸಂಸ್ಕೃತಿ ಅನಾವರಣಕ್ಕೆ ಒಂದು ವೇದಿಕೆ ಆಗಿದೆ ಎಂದರು.
ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಬ್ರಹ್ಮಾವರ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ರಾಮಚಂದ್ರ ಐತಾಳ್, ಸಂಘಟಕ ಪ್ರಸಾದ್ ಬಿಲ್ಲವ, ಚೇಂಪಿ ದಿನೇಶ್ ಆಚಾರ್ಯ, ಮಂಜುನಾಥ ಹಿಲಿಯಾಣ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಸಾಹಿತಿ ಸತೀಶ್ ವಡ್ಡರ್ಸೆ ನಿರೂಪಿಸಿದರು.