Sunday, November 24, 2024
Sunday, November 24, 2024

ಅತಿವೃಷ್ಠಿ ಹಾನಿಗೆ ತುರ್ತಾಗಿ ಪರಿಹಾರ ಒದಗಿಸಲು ಮುಂದಾಗಿ: ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

ಅತಿವೃಷ್ಠಿ ಹಾನಿಗೆ ತುರ್ತಾಗಿ ಪರಿಹಾರ ಒದಗಿಸಲು ಮುಂದಾಗಿ: ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

Date:

ಉಡುಪಿ: ಪ್ರತಿವರ್ಷವೂ ಮಳೆಯಿಂದ ಹಾನಿಗಳು ಒಂದೇ ಪ್ರದೇಶಗಳಲ್ಲಿ ಸಂಭವಿಸುವುದು ಸರ್ವೆ ಸಾಮಾನ್ಯವಾಗಿದ್ದು, ಇವುಗಳಿಗೆ ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಮಳೆ ಹಾನಿಗೆ ಸಂಬಂಧಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳೊಂದಿಗೆ ಮಳೆ ಹಾನಿಯ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ವರ್ಷ ಪ್ರವಾಹ ಹಾಗೂ ಕಡಲಕೊರೆತಕ್ಕೆ ಒಳಪಡುವ ಪ್ರದೇಶಗಳಲ್ಲಿ ಪರ್ಮನೆಂಟ್ ಫ್ಲಡ್ ಮಾನೇಜ್‌ಮೆಂಟ್ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿಕೊಂಡು ಪ್ರವಾಹ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದರು.

ಪ್ರಸಕ್ತ ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ರೈತರು ಹಾಗೂ ಬಡ ಜನರಿಗೆ ಪರಿಹಾರ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಶೀಘ್ರವಾಗಿ ತಲುಪಿಸಲು ಕಾರ್ಯಪ್ರವೃತ್ತರಾಗಿ ಕ್ರಮವಹಿಸಬೇಕು. ಸಂತ್ರಸ್ಥರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಪತ್ತು ಪರಿಹಾರ ಮೊತ್ತವನ್ನು ಒಟ್ಟುಗೂಡಿಸಿ ಪರಿಹಾರ ನೀಡಬೇಕು.

ಮನೆ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಇರುವ ನಿರಾಶ್ರಿತರು ಅಲ್ಲಿ ಇರುವ ವರೆಗೂ ಸರ್ಕಾರದ ನಿಯಮಾವಳಿಯನ್ವಯ ದೈನಂದಿನ ಅಗತ್ಯತೆಗಳನ್ನು ಒದಗಿಸಬೇಕು. ಆಹಾರದ ಜೊತೆಗೆ ಮೊಟ್ಟೆಯನ್ನು ನೀಡಬೇಕು. ನಿರಾಶ್ರಿತರು ಒಂದೊಮ್ಮೆ ಕಾಳಜಿ ಕೇಂದ್ರಗಳಿಗೆ ಹೋಗದೇ ತಮ್ಮ ಸಂಬಂಧಿಗಳ ಮನೆಯಲ್ಲಿದ್ದರೂ ಸಹ ಆಹಾರದ ಕಿಟ್ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.

ಸಾಮಾನ್ಯವಾಗಿ ಮಳೆಯಿಂದಾಗಿ ಮನೆಹಾನಿ, ಗುಡ್ಡ ಕುಸಿತ, ಮೂಲಭೂತ ಸೌಕರ್ಯಗಳ ಹಾನಿಗಳು ಉಂಟಾಗುತ್ತವೆ ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು ಕಳೆದ 3 ವರ್ಷಗಳಿಂದ ಹೆಚ್ಚಿನ ಮಳೆಯಿಂದಾಗಿ ಮನೆ ಕಳೆದುಕೊಂಡವವರಿಗೆ ನೂತನ ವಸತಿ ನಿರ್ಮಾಣಕ್ಕೆ ರಾಜೀವ್ ಗಾಂಧೀ ವಸತಿ ನಿಗಮದ ವತಿಯಿಂಧ ನೀಡುವ ಸೌಲಭ್ಯವನ್ನು ಸಮರ್ಪಕವಾಗಿ ಅನುಷ್ಠಾನವಾಗದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು ಹಾಗೂ ಕಿರಿಯ ಇಂಜಿನಿಯರ್‌ಗಳು ನಿಗಧಿತ ಕಾಲಾವಧಿಯೊಳಗೆ ಸರಿಯಾದ ವರದಿಗಳನ್ನು ನೀಡದೇ ಇರುವುದು ಇದಕ್ಕೆ ಕಾರಣ ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರವಹಿಸಬೇಕು.

ಗ್ರಾಮೀಣಾಭಿವೃಧ್ದಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದರು.
ಗದ್ದೆಗಳಲ್ಲಿ ನೀರು ತುಂಬಿಕೊಂಡು ಹಾನಿಗೊಳಗಾಗಿರುವ ಬೆಳೆ ಹಾನಿ ಸಮೀಕ್ಷೆಯನ್ನು ಮುಂದಿನ 2 ದಿನಗಳ ಒಳಗಾಗಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿಯನ್ನು 10 ದಿನಗಳ ಒಳಗಾಗಿ ಅಂದಾಜಿಸಿ ಪರಿಹಾರವನ್ನು ನೀಡುವ ಕೆಲಸವಾಗಬೇಕು ಎಂದರು.

ಮಳೆ ಗಾಳಿಯಿಂದಾಗಿ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರಂಗಳು, ವಿದ್ಯುತ್ ಲೈನ್‌ಗಳು ಹಾಳಾಗುವುದು ನಿರೀಕ್ಷಿತವಾಗಿದ್ದು, ಇವುಗಳ ದಾಸ್ತಾನು ಇಟ್ಟುಕೊಂಡು ಪುನರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ 2 ದಿನಗಳ ಒಳಗಾಗಿ ಕೈಗೊಂಡು ವಿದ್ಯುಚ್ಛಕ್ತಿ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುವಂತೆ ಮೆಸ್ಕಾಂ ಆಧಿಕಾರಿಗಳಿಗೆ ಸೂಚನೆ ನೀಡಿದರು.

ಪಶ್ಚಿಮ ಘಟ್ಟಗಳಿಂದ ನೀರು ರಭಸವಾಗಿ ನದಿಯಲ್ಲಿ ಹರಿದು ಬರುವಾಗ ಮರದ ದಿಮ್ಮಿಗಳನ್ನು ಹೊತ್ತು ತಂದು ಕಿಂಡಿ ಅಣೆಕಟ್ಟುಗಳಿಗೆ ಅಡ್ಡಲಾಗಿ ನಿಂತು ನದಿ ನೀರು ಸರಾಗವಾಗಿ ಹರಿದು ಹೋಗದೇ ಕೃತಕ ನೆರೆಗಳು ಉಂಟಾಗಿ ಹತ್ತಿರದ ಗ್ರಾಮಗಳಿಗೆ ಮತ್ತು ರೈತರ ಹೊಲ ಗದ್ದೆಗಳಿಗೆ ತೊಂದರೆ ಉಂಟು ಮಾಡುತ್ತಿವೆ ಹೀಗಾಗದಂತೆ ಅರಣ್ಯ ಇಲಾಖೆ ಅದಿಕಾರಿಗಳು ಎಚ್ಚರವಹಿಸಬೆಕಂದು ಸೂಚನೆ ನೀಡಿದರು.

ತುರ್ತು ಸಂದರ್ಭದಲ್ಲಿ ಜನಸಾಮಾನ್ಯರ ರಕ್ಷಣೆಗೆ ಸ್ಪಂದಿಸುವ ಸ್ವಯಂ ಸೇವಕರಿಗೆ ಅಪದಮಿತ್ರ ಯೋಜನೆಯಡಿ ತರಬೇತಿ ಒದಗಿಸಿ, ಸುರಕ್ಷಾ ಸಾಧನಗಳ ಕಿಟ್ ಗಳನ್ನು ವಿತರಿಸಬೇಕು ಎಂದ ಅವರು ಅವರುಗಳ ಸುರಕ್ಷತೆಗೆ 5 ಲಕ್ಷದ ವರೆಗಿನ ಜೀವವಿಮೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಪ್ರಾಕೃತಿಕ ವಿಕೋಪದಲ್ಲಿ ಸಣ್ಣ ಪ್ರಮಾಣದ ಹಾನಿಗಳನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಕೈಗೊಂಡರೆ, ದೊಡ್ಡ ಪ್ರಮಾಣದ ಹಾನಿಗಳ ಪುರ್ನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಕೋರಿ ಸರ್ಕಾರಕ್ಕೆ ಸಲ್ಲಿಸಿದ್ದಲ್ಲಿ ಪರಿಹರಿಸಲು ಸ್ಪಂದಿಸುವುದಾಗಿ ತಿಳಿಸಿದರು.

ಜಲವಲಯಗಳ ವ್ಯಾಪ್ತಿಗೆ ಬರುವಂತಹ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಹಾನಿಗೊಳಗಾದ ಸಂದರ್ಭದಲ್ಲಿ ಪರಿಹಾರ ಒದಗಿಸಲು ಸಾಧ್ಯವಿಲ್ಲವೆಂದು ಉನ್ನತ ನ್ಯಾಯಾಲಯದ ಆದೇಶಗಳು ಸ್ಪಷ್ಟಪಡಿಸಿವೆ. ಜಲ ವಲಯಗಳ ವ್ಯಾಪ್ತಿಯನ್ನು ಗುರುತಿಸುವ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ನಿಗಧಿಪಡಿಸಲಾಗುವುದು ಎಂದರು.

ಕರಾವಳಿ ಭಾಗದಲ್ಲಿ ಕೇಂದ್ರ ಪ್ರಾಯೋಜಿತ ರಾಷ್ಟ್ರ‍ೀಯ ಹೆದ್ದಾರಿ, ರಕ್ಷಣಾ ಇಲಾಖಾ ಕಾಮಗಾರಿಗಳಿಂದ ಜನ ಸಾಮಾನ್ಯರ ದೈನಂದಿನ ಕಾರ್ಯಗಳಿಗೆ ಹೆಚ್ಚಿನ ಅನಾನುಕೂಲಗಳು ಉಂಟಾಗುತ್ತಿರುವ ಬಗ್ಗೆ ದೂರುಗಳಿವೆ ಇವುಗಳನ್ನು ಬಗೆಹರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ನಡೆಸಿ, ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಸೂಚನೆ ನೀಡಿದರು.

ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರ ವಸತಿಗಳು ಮಳೆಯಿಂದ ಹಾನಿಗೊಳಗಾದಲ್ಲಿ ಅವರಿಗೆ ಪರಿಹಾರ ಒದಗಿಸಬೇಕೆಂಬ ಆಧೇಶವನ್ನು ಈಗಾಗಲೇ ಹೊರಡಿಸಲಾಗಿದೆ ಇದನ್ನು ಅಧಿಕಾರಿಗಳು ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು.

ಕರಾವಳಿಯ ಜಿಲ್ಲೆಗಳಲ್ಲಿ ಕಡಲ ಕೊರೆತಗಳು ಪ್ರತೀ ಮಳೆಗಾಲದಲ್ಲಿಯೂ ಉಂಟಾಗುವುದು ಸಾಮಾನ್ಯವಾಗಿದ್ದು, ಇದರ ಶಾಶ್ವತ ಪರಿಹಾರಕ್ಕೆ ಯೋಜನೆಗಳನ್ನು ರೂಪಿಸುವುದು ಅವಶ್ಯವಾಗಿದೆ ಈ ಕಾರ್ಯಕ್ಕೆ ಸರ್ಕಾರ ಬದ್ದವಾಗಿದ್ದು ತಜ್ಞರ ಸಲಹೆಯನ್ನು ಆಧರಿಸಿ ಇತರೇ ಮೂಲಗಳಿಂದ ಅನುದಾನ ಪಡೆದು ಅನುಷ್ಠಾನಗೊಳಿಸಲಾಗುವುದು, ಹಾಲಿ ಕೈಗೊಂಡಿರುವ ತಾತ್ಕಾಲಿಕ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಹಾಗೂ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಸಕರುಗಳು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!