ಉಡುಪಿ: ಯಾತ್ರ ಸ್ಥಳವಾದ ಅಮರನಾಥ ಕ್ಷೇತ್ರದ ಪ್ರದೇಶದಲ್ಲಿ ಶುಕ್ರವಾರ ಸಂಜೆ 5.30ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಇದರಿಂದ ಅಮರನಾಥ ಯಾತ್ರೆ ಮಾರ್ಗದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿ, ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಧಿಡೀರನೇ ಜೋರಾಗಿ ನೀರು ಹರಿದು ಬಂದಿದ್ದರಿಂದ ಯಾತ್ರೆಯ ಮಾರ್ಗದಲ್ಲಿ ಯಾತ್ರಾರ್ಥಿಗಳು ತಂಗಲು ನಿರ್ಮಿಸಿದ್ದ ಟೆಂಟ್ ಗಳು ಪ್ರವಾಹದ ನೀರಿನ ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿವೆ ಹಾಗೂ ಹಲವು ಯಾತ್ರಾರ್ಥಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆಂದು ಸುದ್ದಿ ಇರುತ್ತದೆ. ಮೇಘಸ್ಫೋಟದ ಅನಾಹುತ ಬಳಿಕ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಉಡುಪಿ ಜಿಲ್ಲೆಯಿಂದ ಪವಿತ್ರ ಕ್ಷೇತ್ರವಾದ ಅಮರನಾಥ ಕ್ಷೇತ್ರ ಯಾತ್ರೆ ಕೈಗೊಂಡು, ಮೇಘಸ್ಪೋಟದ ಪ್ರವಾಹಕ್ಕೆ ಸಿಲುಕಿರುವ ಅಥವಾ ಸುರಕ್ಷಿತವಾಗಿರುವ ಯಾತ್ರಾರ್ಥಿಗಳು ಯಾರಾದರೂ ಇದ್ದಲ್ಲಿ ಇವರ ಸಂಬಂಧಿಕರು ಕೂಡಲೇ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 1077 (0820-2574802) ಕರೆ ಮಾಡಿ ಸಂಬಂಧಪಟ್ಟ ಯಾತ್ರಾರ್ಥಿಗಳ ವಿವರ / ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.