ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಸಭಾ ಸದಸ್ಯರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರನ್ನು ನಾಮ ನಿರ್ದೇಶನ ಮಾಡುವ ಮೂಲಕ ಚಿಂತಕರ ಚಾವಡಿ ಎಂದು ಕರೆಯಲ್ಪಡುವ ರಾಜ್ಯಸಭೆಯ ಘನತೆಗೆ ಮೆರುಗು ನೀಡಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಅನ್ನ, ಅಭಯ, ವಿದ್ಯೆ, ಶಿಕ್ಷಣದ ಮೂಲಕ ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ, ಧರ್ಮ ಜಾಗೃತಿ, ಆರೋಗ್ಯ, ಸ್ತ್ರೀ ಶಕ್ತಿ ಸಂಘಟನೆಯ ಮೂಲಕ ಮಹಿಳಾ ಸಶಕ್ತೀಕರಣ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಜನರ ಆರ್ಥಿಕತೆ ಸಬಲೀಕರಣ, ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಜನ ಜಾಗೃತಿ, ವರದಕ್ಷಿಣೆ ಪಿಡುಗು ನಿಯಂತ್ರಿಸಿ ಸರಳ ವಿವಾಹ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ದಶಕಗಳಿಂದ ನಿರಂತರ ಸಾಮೂಹಿಕ ವಿವಾಹ ಆಯೋಜನೆಯ ಮೂಲಕ ಹಲವು ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಚಿಂತನೆ ರಾಜ್ಯ ಸಭೆಯ ಸಂಸದರಾಗಿ ದೇಶದಾದ್ಯಂತ ಕಾರ್ಯರೂಪಗೊಳ್ಳಲು ಸಹಕಾರಿಯಾಗಲಿದೆ.
ಅತ್ಯಂತ ಅರ್ಹ ವ್ಯಕ್ತಿಗೆ ಸಾಧನೆಯನ್ನು ಗುರುತಿಸಿ ಮಹತ್ವದ ಹುದ್ದೆಯನ್ನು ನೀಡಿ ಗೌರವಿಸಿದ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಹಾಗೂ ಮುಂದಿನ ದಿನಗಳಲ್ಲಿ ಖಾವಂದರಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮೂಡಿಬರಲಿ ಎಂಬ ಶುಭ ಹಾರೈಕೆಯೊಂದಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.