ಮಲ್ಪೆ: ಗಾಂಧಿ ಚಿಂತನೆಗಳು ಇಂದು ಮಹತ್ವವನ್ನು ಪಡೆಯುತ್ತಿರುವುದು ಮಹತ್ವದ ವಿಚಾರವಾಗಿದೆ. ಕೊರೊನಾ ನಮಗೆ ಕಲಿಸಿದ ಪಾಠಗಳಲ್ಲಿ ಗಾಂಧಿ ಚಿಂತನೆ ಪ್ರಸ್ತುತತೆಯ ಗ್ರಾಮೀಣ ಅಭಿವೃದ್ದಿ, ನೈರ್ಮಲ್ಯ, ವೈಯುಕ್ತಿಕ ಶಿಸ್ತು,
ಆರೋಗ್ಯದ ಕುರಿತಾದ ಕಾಳಜಿಗಳ ಬಗ್ಗೆ ಗಾಂಧೀಜಿಯವರ ಚಿಂತನೆಗಳು ಎಂದೂ ಸಕಾಲಿಕ ಎಂದು ಖ್ಯಾತ ಚಿಂತಕ ಮತ್ತು ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿಗಳಾದ ಇಂದಿರಾ ಕೃಷ್ಣಪ್ಪ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಸಹಯೋಗದಲ್ಲಿ ನಡೆದ ಗಾಂಧಿ ಚಿಂತನೆಯ ಪ್ರಸ್ತುತತೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧಿ ಚಿಂತನೆಯ ಬಗ್ಗೆ ಉಪನ್ಯಾಸ ನೀಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೆಬ್ರಿ ಇಲ್ಲಿನ ಪ್ರಾಂಶುಪಾಲರಾದ ಡಾ. ಪ್ರಸಾದ್ ರಾವ್ ಎಂ. ಅವರು, ಹಿಂಸಾತ್ಮಕ ಹೋರಾಟದಿಂದ ಗಳಿಸಿದ ವಿಜಯ ಕ್ಷಣಿಕ. ಹಿಂಸೆಯಿಂದ ಪ್ರತಿಹಿಂಸೆ ಮಾತ್ರ ಹುಟ್ಟುತ್ತದೆ ಎನ್ನುವ ಗಾಂಧಿಯ ಮಾತು ಎಲ್ಲಾ ಕಾಲಕ್ಕೂ ಪ್ರಸ್ತುತ.
ಶಾಂತಿಗಾಗಿ ಹೋರಾಟ ಎಂದರೆ ಅದು ನೈತಿಕವಾಗಿಯೂ ಮತ್ತು ಅಹಿಂಸಾತ್ಮಕವಾಗಿಯೂ ಇರಲೇಬೇಕಾಗುತ್ತದೆ. ಈ ಕಾರಣದಿಂದ ನೈತಿಕ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಮಂಜುನಾಥ ಸ್ವಾಗತಿಸಿ, ಉಪನ್ಯಾಸಕಿ ಪ್ರತಿಮಾ ವಂದಿಸಿದರು. ಉಪನ್ಯಾಸಕ ದಯಾನಂದ ಕುಮಾರ್ ನಿರೂಪಿಸಿದರು.