ಉಡುಪಿ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಉಡುಪಿಯ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ. ವಿ. ಎಸ್. ಆಚಾರ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಉಡುಪಿ ನಗರ, ಜಿಲ್ಲಾ, ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ವ್ಯಾಪ್ತಿಯ ಸ್ಥಳಗಳಿಗೆ ನಿಗಮದ ಎಲ್ಲಾ ಸಾರಿಗೆಗಳ ಕಾರ‍್ಯಾಚರಣೆಯನ್ನು ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು, ವಿದ್ಯಾರ್ಥಿಗಳು ಸದರಿ ಸಾರಿಗೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಬಸ್ ನಿಲ್ದಾಣದಲ್ಲಿ 8 ವಾಣಿಜ್ಯ ಮಳಿಗೆ, 1 ಉಪಹಾರ ಗೃಹ, 3 ರಿಟೇಲ್ ಮಳಿಗೆ, ಒಂದು ದ್ವಿಚಕ್ರ /ಕಾರ್ ಪಾರ್ಕಿಂಗ್ ವ್ಯವಸ್ಥೆ, ಮೊದಲ ಅಂತಸ್ತು ಮತ್ತು ಎರಡನೇ ಅಂತಸ್ತಿನ ಹಾಲ್, ಸಂಚಾರ ನಿಯಂತ್ರಣ ಕೊಠಡಿ, ಪ್ಲಾಟ್‌ಫಾರಂ, ಪಾಸು ಕೌಂಟರ್, ಪುರುಷ ಮತ್ತು ಮಹಿಳಾ ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಮೂಲಭೂತ ಸೌಲಭ್ಯಗಳಿದ್ದು, ವಾಹನಗಳ ನಿರ್ಗಮನಗಳ ವೇಳಾಪಟ್ಟಿಯ ಬೋರ್ಡನ್ನು ಅಳವಡಿಸಲಾಗಿರುತ್ತದೆ ಎಂದು ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.