ಮಣಿಪಾಲ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ೧೨ನೆಯ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅನುಪಸ್ಥಿತರಾಗಿದ್ದ ಹಿರಿಯ ಸಾಹಿತಿ ವೈದೇಹಿ ಅವರಿಗೆ ಅವರ ಸ್ವಗೃಹದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ವೈದೇಹಿ ಅವರು, ಇದು ನನ್ನ ಸಾಹಿತ್ಯಕ್ಕೆ ಸಂದ ಗೌರವ, ನಾನು ಈ ಮಟ್ಟಕ್ಕೆ ಬರಬೇಕಾದರೆ, ನನ್ನ ಸಮಕಾಲೀನ ಸಾಹಿತಿಗಳು, ಕುಟುಂಬ ವರ್ಗದ ಪ್ರೋತ್ಸಾಹ, ಸಹಕಾರ ಬಹಳಷ್ಟಿದೆ. ನನ್ನನ್ನು ಗುರುತಿಸಿ ಗೌರವಿಸಿದ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ವೈದೇಹಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಕೊಡುಗೆ ಅಪಾರ, ಅವರ ಸ್ತ್ರೀವಾದಿ ಚಿಂತನೆಗಳು ಎಂದಿಗೂ ಚಿರಸ್ಥಾಯಿಯಾಗಿರುತ್ತದೆ, ಅಂತಹ ಸಾಹಿತಿಗಳಿಗೆ ಗೌರವಿಸಿದ್ದು, ನಮ್ಮ ವಿಶ್ವವಿದ್ಯಾನಿಲಯದ ಗೌರವವನ್ನು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ. ಮಹೇಶ್ ಚಿಂತಾಮಣಿ, ಕಾಲೇಜಿನಿಂದ ಹಿಡಿದು ವಿಶ್ವವಿದ್ಯಾನಿಲಯ ಮಟ್ಟದ ಪಠ್ಯಗಳಲ್ಲಿ ವೈದೇಹಿ ಅವರ ಸಾಹಿತ್ಯ ಇದೆ. ಮಕ್ಕಳ ಸಾಹಿತ್ಯದಿಂದ ಹಿಡಿದು ಹಲವಾರು ಪ್ರಕಾರದ ಸಾಹಿತ್ಯಗಗೆ ಅವರು ನೀಡಿರುವ ಕೊಡುಗೆ ಅಮೋಘವಾದದ್ದು, ಅವರನ್ನು ಗೌರವಿಸಿದ್ದು ನಮ್ಮ ವಿಶ್ವವಿದ್ಯಾನಿಲಯದ ಘನತೆಯನ್ನು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ, ಉಪಕುಲಸಚಿವ ಪ್ರೊ. ಅಶೋಕಕುಮಾರ ಸುರಪುರ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕ.ಸಾ.ಪ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್, ಕವಯಿತ್ರಿಗಳಾದ ಕಾತ್ಯಾಯಿನಿ ಕುಂಜಿಬೆಟ್ಟು, ಪೂರ್ಣಿಮಾ ಸುರೇಶ್‌ನ ಉಪಸ್ಥಿತರಿದ್ದರು.