ಕಾರ್ಕಳ: ಕಾರ್ಕಳ ಪುರಸಭೆ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ ಮತ್ತು ಪಡಿ ಸಂಸ್ಥೆ ಮಂಗಳೂರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಪುರಸಭಾ ಮಟ್ಟದ ಮಕ್ಕಳ ಹಕ್ಕುಗಳ ವಿಶೇಷ ವಾರ್ಡ್ ಸಭೆಯನ್ನು ಕರ್ನಾಟಕ ರಾಜ್ಯದಲ್ಲೇ ಉಡುಪಿ ಜಿಲ್ಲೆಯ ಕಾರ್ಕಳ ಪುರಸಭೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಯಿತು.
ವಾರ್ಡ್ ಮಟ್ಟದ ಮಕ್ಕಳ ಹಕ್ಕುಗಳ ವಿಶೇಷ ಸಭೆಯ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರಾದ ಸುಮಾ ಕೇಶವ್ ಅವರು ವಹಿಸಿದ್ದರು. ಕಾರ್ಕಳದಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯತ್ ಗಳಲ್ಲಿ ನಡೆಯುವ ಗ್ರಾಮಸಭೆ ಗಳಂತೆಯೇ ಮಕ್ಕಳಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಪುರಸಭೆಯಲ್ಲಿ ವೇದಿಕೆಯನ್ನು ಸೃಷ್ಟಿ ಮಾಡಿಕೊಡಬೇಕು ಎನ್ನುವುದು ಪಡಿ ಸಂಸ್ಥೆಯ ಉದ್ದೇಶವಾಗಿರುತ್ತದೆ.
ಮಕ್ಕಳ ಹಕ್ಕುಗಳು ಎಂದರೇನು? ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಕುರಿತು ಮತ್ತು ಮಕ್ಕಳ ನಾಲ್ಕು ಪ್ರಮುಖ ಹಕ್ಕುಗಳ ಕುರಿತು ಪ್ರಾಸ್ತಾವಿಕವಾಗಿ ಪಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶೋಭಾ ಭಾಸ್ಕರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ವೈಯಕ್ತಿಕ ಸಮಸ್ಯೆ ಮತ್ತು ಶಾಲೆಯ ಸಮಸ್ಯೆಯನ್ನು ವಿವಿಧ ಇಲಾಖೆಯ ಅಧಿಕಾರಿಯವರ ಹತ್ತಿರ ಹೇಳಿದರು ಮತ್ತು ಮಕ್ಕಳು ಕೇಳಿದ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಮಕ್ಕಳು ಕೇಳಿದ ಪ್ರಮುಖ ಪ್ರಶ್ನೆಗಳು:
1. ಮನೆಯಲ್ಲಿ ಕರೆಂಟ್ ವ್ಯವಸ್ಥೆ ಇಲ್ಲದಿರುವುದರಿಂದ ಓದಲು ಬಹಳ ಕಷ್ಟವಾಗುತ್ತದೆ.
2. ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು.
3. ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಸಮಸ್ಯೆ ಇರುವುದು.
4. ನನ್ನ ಅಜ್ಜಿಯ ಮನೆಯಲ್ಲಿ ಶೌಚಾಲಯ ಇಲ್ಲದಿರುವುದು.
5. ನನ್ನ ಮನೆಯಲ್ಲಿ ಮೇಲ್ಛಾವಣಿ ಸೋರುತ್ತದೆ.
6. ಮನೆಯ ಹತ್ತಿರ ಬೀದಿ ನಾಯಿಗಳ ಸಮಸ್ಯೆ ಇದೆ.
7. ಶಾಲೆಯ ಎದುರುಗಡೆ ರೋಡ್ ನಲ್ಲಿ ವಾಹನಗಳು ವೇಗವಾಗಿ ಹೋಗುತ್ತವೆ ಆದುದರಿಂದ ನಮಗೆ ರಸ್ತೆ ದಾಟಲು ಸಮಸ್ಯೆ ಆಗುತ್ತಿದೆ.
8. ನಮ್ಮ ಮನೆಯಲ್ಲಿ ನೀರಿನ ಸಮಸ್ಯೆ ಇದೆ.
ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಅಂದರೆ ಭಯ ಪಡದೆ ಹೇಳಬೇಕು. ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹೆಚ್ಚಾಗಿ ಹೇಳಬೇಕು ಮತ್ತು ಪುರಸಭಾ ಮಟ್ಟದ ಮಕ್ಕಳ ಹಕ್ಕುಗಳ ವಾರ್ಡ್ ಸಭೆ ನಡೆಯುತ್ತಿರುವುದು ಬಹಳ ಸಂತೋಷದ ವಿಚಾರ.
ಹಾಗೆ ಈ ಕಾರ್ಯಕ್ರಮದ ರೂವಾರಿಗಳಾದ ಪುರಸಭಾ ಸದಸ್ಯರಾದ ಪ್ರದೀಪ್ ರವರು ನನ್ನ ವಾರ್ಡಿನಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮಕ್ಕಳ ಹಕ್ಕುಗಳ ವಿಶೇಷ ವಾರ್ಡ್ ಸಭೆ ನಡೆಸುವುತ್ತಿರುವುದು ಹೆಮ್ಮೆಯ ವಿಷಯ ಮತ್ತು ಮಕ್ಕಳು ಕೇಳಿದ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಮೊಟ್ಟ ಮೊದಲ ಬಾರಿಗೆ ಮಕ್ಕಳ ಹಕ್ಕುಗಳ ವಾರ್ಡ್ ಸಭೆ ನಡೆಯುತ್ತಿರುವುದು ಹೆಮ್ಮೆಯ ವಿಷಯ, ಹಾಗೂ ಪಡಿ ಸಂಸ್ಥೆಯ ಕಾರ್ಯವೈಖರಿಯನ್ನು ಅಧ್ಯಕ್ಷತೆ ವಹಿಸಿದ ಪುರಸಭಾ ಅಧ್ಯಕ್ಷರಾದ ಸುಮಾ ಕೇಶವ್ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜೇಶ್, ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತಮ ಸ್ಪಂದನೆ ನೀಡಿದರು ಮತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಮಕ್ಕಳಿಗೆ ಆಶ್ವಾಸನೆ ನೀಡಿದರು. ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಬಾಲಕೃಷ್ಣ ಶಿಕ್ಷಣ ಇಲಾಖೆಯ ಯೋಜನೆ ಕುರಿತು ಮಾಹಿತಿ ನೀಡಿದರು ಮತ್ತು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಸ್ಪಂದಿಸಿದರು. ಹಾಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ಮಕ್ಕಳ ಸಹಾಯವಾಣಿ-1098 ಕೇಂದ್ರದ ನೇಹಾ, ಮಕ್ಕಳ ಸಹಾಯವಾಣಿಯ ಕುರಿತು ಮಾಹಿತಿ ನೀಡಿದರು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಇದರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಕೃಷ್ಣ ಮಡಿವಾಳ, ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಹೆಗಡೆ, ಪುರಸಭಾ ಉಪಾಧ್ಯಕ್ಷೆ ್ಪಲ್ಲವಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ದಿವಾಕರ್ ಕುಮಾರ್ ಹಾಗೂ ಎಸ್ಡಿಎಂಸಿ ಸಮನ್ವಯ ಸಮಿತಿ ವೇದಿಕೆ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಡಿ ಸಂಸ್ಥೆಯ ರೇಷ್ಮಾ, ಜಿಲ್ಲಾ ಸಂಯೋಜಕ ವಿವೇಕ್, ಪುರಸಭಾ ಸದಸ್ಯರುಗಳಾದ ಭಾರತಿ ಅಮೀನ್, ಮಮತಾ, ಸಂತೋಷ್ ರಾವ್, ಸಂಧ್ಯಾ ಮಲ್ಯ, ಮಾಜಿ ಪುರಸಭಾ ಸದಸ್ಯರಾದ ಪ್ರಕಾಶ್ ರಾವ್, ಶಿಕ್ಷಕರು, ಪೋಷಕರು ಹಾಗೂ ಶಾಲೆಯ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.