ಉಡುಪಿ: ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ವತಿಯಿಂದ, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ (ಪಿ.ಎಮ್.ಎಫ್.ಎಮ್.ಇ) ಯಡಿ ಸಂಜೀವಿನಿ ಸ್ವ- ಸಹಾಯ ಗುಂಪುಗಳಿಗೆ ಮೂಲ ಬಂಡವಾಳ ನಿಧಿ ವಿತರಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಕಿರು ಆಹಾರ ಉತ್ಪಾದನೆ ಮಾಡುವ ಸಂಜೀವಿನಿ ಮಹಿಳಾ ಸ್ವ-ಸಹಾಯ ಗುಂಪಿನ ಪ್ರತೀ ಫಲಾನುಭವಿಗಳು ರೂ. 40,000 ಗಳ ವರೆಗೆ ಶೇ.6 ರಷ್ಟು ಬಡ್ಡಿಯಂತೆ ಸಾಲ ಪಡೆಯಲು ಅರ್ಹರಿರುತ್ತಾರೆ.
ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟಗಳಲ್ಲಿ ಸದಸ್ಯತ್ವ ಪಡೆದಿರುವ ಮಹಿಳಾ ಸ್ವ-ಸಹಾಯ ಗುಂಪಿನಲ್ಲಿ ಕಿರು ಆಹಾರ ಸಂಸ್ಕರಣಾ ಚಟುವಟಿಕೆಗಳಾದ ಕಿರುಧಾನ್ಯಗಳಿಂದ ತಯಾರಿಸಿದ ಆಹಾರ ಉತ್ಪನ್ನ, ಹಪ್ಪಳ, ಉಪ್ಪಿನ ಕಾಯಿ, ಸಂಡಿಗೆ, ಜೋಳದ ರೊಟ್ಟಿ, ಶಾವಿಗೆ, ಸಾಂಬಾರು ಪದಾರ್ಥ, ಚಟ್ನಿಪುಡಿ, ಬಿಸ್ಕತ್, ವಿವಿಧ ಬಗೆಯ ಚಿಪ್ಸ್, ಚಕ್ಕುಲಿ, ನಿಪ್ಪಟ್ಟು, ಚಾಕಲೇಟ್, ಹೋಳಿಗೆ, ವಿವಿಧ ಬಗೆಯ ಮಾಲ್ಟ್, ತೆಂಗಿನಕಾಯಿ ಉತ್ಪನ್ನಗಳು, ವಿವಿಧ ಬಗೆಯ ಸಿಹಿ ತಿಂಡಿ ತಯಾರಿಕೆ, ಹಿಟ್ಟಿನ ತುರಿ, ಖಾದ್ಯ ತೈಲ, ಹಾಲಿನ ಉತ್ಪನ್ನ, ಬೆಲ್ಲ, ಸಕ್ಕರೆ, ಕಾಫಿ ಪುಡಿ, ಟೀ ಪುಡಿ ಇತ್ಯಾದಿಗಳನ್ನು ಕೈಗೊಂಡಿರುವ ವೈಯಕ್ತಿಕ ಮತ್ತು ಗುಂಪುಗಳ ಅರ್ಹ ಫಲಾನುಭವಿಗಳು ಜೂನ್ 15 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತಿ ಅಥವಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳನ್ನು ಸಂಪರ್ಕಿಸಿ, ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.