ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ಮತ್ತು ಪೀಡಿಯಾಟ್ರಿಕ್ ಹೆಮಟಾಲಜಿ ಆಂಡ್ ಆಂಕೊಲಾಜಿ ಸಹಯೋಗದೊಂದಿಗೆ ಮಣಿಪಾಲದಲ್ಲಿ ಪ್ರಾಯೋಗಿಕವಾಗಿ ಮಕ್ಕಳ ರಕ್ತಶಾಸ್ತ್ರ ಕುರಿತು ರಾಷ್ಟ್ರೀಯ ತರಬೇತಿ ಕಾರ್ಯಾಗಾರ ನಡೆಯಿತು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಶರತ್ ಕುಮಾರ್ ರಾವ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಈ ಕಾರ್ಯಾಗಾರವು ಮಕ್ಕಳ ವೈದ್ಯರಿಗೆ ಮತ್ತು ಮಕ್ಕಳ ವೈದ್ಯಶಾಸ್ತ್ರದಲ್ಲಿ ತರಬೇತಿ ಪಡೆಯುತ್ತಿರುವವರಿಗೆ ರಕ್ತಶಾಸ್ತ್ರದ ಬಗ್ಗೆ ತಮ್ಮ ಜ್ಞಾನವನ್ನು ಕಲಿಯಲು ಮತ್ತು ನವೀಕರಿಸಲು ಅನುವು ಮಾಡಿಕೊಡುತ್ತದೆ
ಎಂದು ಹೇಳಿದರು.
ಕಾರ್ಯಾಗಾರಕ್ಕೆ ಗೌರವ ಅತಿಥಿಯಾಗಿ ಆಗಮಿಸಿ ಮಾತನಾಡಿದ ಉಡುಪಿ ಜಿಲ್ಲಾ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನ ಅಧ್ಯಕ್ಷರಾದ ಡಾ. ಶಶಿಧರ್ ಎಸ್ ಬಿ ಮಾತನಾಡುತ್ತಾ, ಈ ರೀತಿಯ ಕಾರ್ಯಾಗಾರಗಳು ಮಕ್ಕಳ ವೈದ್ಯರ ಜ್ಞಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಮಕ್ಕಳನ್ನು ಬೇಗನೇ ವಿಶೇಷ ತಜ್ಞರ ಬಳಿ ಕಳುಹಿಸಿ ಉತ್ತಮ ಚಿಕಿತ್ಸಾ ಆರೈಕೆಗೆ ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲೋಜಿ ವಿಭಾಗದ ಸಹಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕಾರ್ಯಾಗಾರದ ಕುರಿತು ಅವಲೋಕನ ನೀಡಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ. ಅರ್ಚನಾ ಎಂ.ವಿ ಸ್ವಾಗತಿಸಿ ಮತ್ತು ಡಾ. ವಿನಯ್ ಎಂ.ವಿ ವಂದಿಸಿದರು.
ಕಾರ್ಯಾಗಾರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು ಮತ್ತು ಮಕ್ಕಳ ರಕ್ತಶಾಸ್ತ್ರದ ವಿವಿಧ ವಿಷಯಗಳ ಕುರಿತು ವ್ಯಾಪಕ ಚರ್ಚೆ ನಡೆಸಿದರು.
ಭಾರತದ ಪ್ರತಿಷ್ಠಿತ ಸಂಸ್ಥೆಗಳಾದ ಸರ್ ಗಂಗಾ ರಾಮ್ ಆಸ್ಪತ್ರೆ-ದೆಹಲಿ, ಸಿಎಂಸಿ-ವೆಲ್ಲೂರು ಮತ್ತು ಸೇಂಟ್ ಜಾನ್ಸ್ ಆಸ್ಪತ್ರೆ-ಬೆಂಗಳೂರು ಮುಂತಾದ ಸಂಸ್ಥೆಗಳಿಂದ ತಜ್ಞರು ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದರು.