ಉಡುಪಿ: ಯುವ ಜನಾಂಗ ಮಾದಕ ವಸ್ತುವಿಗೆ ಬಲಿಯಾಗುತ್ತಿದೆ. ಸರಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದರು.
ಅವರು ಇಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಮಲಾ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಹಾಗೂ ರೋಟರಿ ಕ್ಲಬ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಆಯೋಜಿಸಿದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂಬಾಕು ಸೇವನೆಯಿಂದ ಉಂಟಾಗುವ ಹಾನಿ ಮತ್ತು ಸಾವುಗಳು ಹೆಚ್ಚುತ್ತಿರುವ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುತ್ತಾ, ತಂಬಾಕಿನಿಂದ ಉಂಟಾಗುವ ತೊಂದರೆಗಳ ಬಗ್ಗೆ ಎಲ್ಲರಲ್ಲಿಯೂ ಅರಿವಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಮತ್ತು ಮನೋವೈದ್ಯ ಡಾ. ಪಿ.ವಿ ಭಂಡಾರಿ ಮಾತನಾಡಿ, ತಂಬಾಕು ಉತ್ಪನ್ನದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ತಂಬಾಕಿನಿಂದ ವಿಮುಕ್ತಿ ಹೊಂದಲು ಇರುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ವಿರುಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ, ಡಾ. ಸುನೀಲ್ ಜಿ ಹಾಗೂ ಸಂಸ್ಥೆಯ ಆಡಳಿತಾಧಿಕಾರಿಣಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು. ನಾಗರಾಜ ಮೂರ್ತಿ ಸ್ವಾಗತಿಸಿ, ಮುಜಮಿಲ್ ವಂದಿಸಿ ಹಾಗೂ ಗಿರೀಶ್ ಎಂ. ಎನ್ ನಿರೂಪಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳಿಂದ ಆಟೋ ಚಾಲಕರು, ಮಾಲಕರು ಹಾಗೂ ಆಸ್ಪತ್ರೆಯ ಒಳರೋಗಿಗಳಿಗೆ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಗಳ ಬಗ್ಗೆ ಮಾಹಿತಿ ನೀಡಲಾಯಿತು.