ಗಣಿತನಗರ: ಶಿಕ್ಷಣ ಎಂದರೆ ಕೇವಲ ಕಟ್ಟಡ ನಿರ್ಮಾಣ ಮಾಡಿ ಆಕರ್ಷಣೀಯಗೊಳಿಸುವುದಲ್ಲ, ಬದಲಾಗಿ ವಿದ್ಯಾರ್ಥಿಗಳ ಕನಸುಗಳನ್ನು ನನಸುಗೊಳಿಸಲು ಶೈಕ್ಷಣಿಕ ಬದ್ದತೆ ಕೂಡ ಅವಶ್ಯಕ. ಈ ನಿಟ್ಟಿನಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಶೈಕ್ಷಣಿಕ ಕ್ಷೇತ್ರದಲ್ಲಿ ಬೇರೆಯವರಿಗಿಂತ ಭಿನ್ನರಾಗಿ ತೋರುತ್ತಾರೆ ಎಂದು ಮಂಗಳೂರು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕ ಡಾ. ಕೆ.ಸಿ.ನಾಯ್ಕ್ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಒಂಬತ್ತನೇ ಪ್ರತಿಷ್ಠಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಕಣಕಾರ ಎ.ಆರ್. ಮಣಿಕಾಂತ್ ಮಾತನಾಡಿ, ಬದುಕಿನ ಯಾವ ಸಮಸ್ಯೆ ಎದುರಾದರೂ ಆ ಸಮಸ್ಯೆಗಳನ್ನು ಎದುರಿಸುವ ಧೈರ್ಯ ನಮ್ಮ ಜೀವನದಲ್ಲಿ ಇರಬೇಕು. ನಾವು ಯಾವ ವಿಚಾರಕ್ಕೂ ಹೆದರುವ ಅವಶ್ಯಕತೆ ಇಲ್ಲ. ಬದುಕಿನ ಪಯಣದಲ್ಲಿ ಅದೆಷ್ಟೋ ತೊಳಲಾಟದಲ್ಲಿ ಬಳಲಿ ಬೆಂಡಾಗಿ ನಲುಗಿ ಅರಳಿ ನಗುವವರನ್ನು ನೋಡಿ ನಾವು ಹಗುರಾಗಬೇಕು.
ನಾವೂ ಅವರಿಂದ ಉತ್ಸಾಹ ಪಡೆದು ಬೆಳೆಯಬೇಕು. ಇನ್ನೊಬ್ಬರನ್ನು ಬೆಳೆಸಬೇಕು ಎಂಬುದಕ್ಕೆ ಕಾರಣವಾದ ಕ್ಯಾನ್ಸರ್ ಗೆದ್ದ ರಾಜಸ್ಥಾನದ ಅಜ್ಮಿರ್‌ನ ಯುವಕ ಜಯಂತ್ ಹಾಗೂ ತನ್ನ ಇಳಿ ವಯಸ್ಸಿನಲ್ಲಿ ಉಪ್ಪಿನಕಾಯಿ ತಯಾರಿಸಿ ಹೆಸರುವಾಸಿಯಾದ ಹತ್ತಾರು ಜನಕ್ಕೆ ಉದ್ಯೋಗ ನೀಡಿ ಹೆಗಲಾದ ಗುಜರಾತ್ ಮೂದಪುಣೆ ನಿವಾಸಿ ಊರ್ಮಿಳಾ ಜಮುನಾದಾಸರ ಯಶೋಗಾಥೆಯನ್ನು ಉಲ್ಲೇಖಿಸಿದರು.
ಇದೇ ಸಂದರ್ಭ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಸ್. ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮತ್ತು ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ 18 ಲಕ್ಷ 65 ಸಾವಿರ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈವರೆಗೆ ಒಟ್ಟು 76 ಲಕ್ಷದ 47 ಸಾವಿರಗಳಷ್ಟು ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ವಿತರಿಸಲಾಗಿದೆ. ಎನ್.ಡಿ.ಎ ಸಾಧಕ ದ್ವಿತೀಯ ಪಿಯು ವಿದ್ಯಾರ್ಥಿ ಅಜಯ್ ಸುಭ್ರಾಯ್ ಭಟ್ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಜ್ಞಾನಸುಧಾ ಪತ್ರಿಕೆ 32ನೇ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಆಡಳಿತ ಮಂಡಳಿ ಸದಸ್ಯ ಉದ್ಯಮಿ ಗಣಪತಿ ಪೈ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಇದರ ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು, ಉಭಯ ಸಂಸ್ಥೆಗಳ ಪ್ರಾಂಶುಪಾಲರುಗಳು, ಉಪಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ವ್ಯಕ್ತಿಯ ಜೀವನದಲ್ಲಿ ಯಶಸ್ಸಿಗಿಂತ ಆತ್ಮಸಂತೃಪ್ತಿಯಿಂದ ಕೂಡಿದ ಕಾರ್ಯಬದ್ದತೆ ಹೆಚ್ಚು ಪರಿಣಾಮಕಾರಿ ಎಂದರು. ಉಪನ್ಯಾಸಕಿ ಶಮಿತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.