ಉಡುಪಿ: ಹೆಬ್ರಿಯು ತಾಲ್ಲೂಕು ಆಗಿದ್ದು, ತಾಲ್ಲೂಕು ಕಚೇರಿಗೆ ಸುಸಜ್ಜಿತ ಕಟ್ಟಡ ಆಗಿದೆ, ನಾಡಾ ಕಚೇರಿ ಅಟಲ್ ಜನಸ್ನೇಹಿ ಕೇಂದ್ರ ಇಲ್ಲದೆ ಜನತೆಯ ಕಚೇರಿಯ ಕೆಲಸಗಳಿಗೆ ಸಮಸ್ಯೆಯಾಗಿತ್ತು. ಜನತೆಗೆ ಈ ಬಗೆಗೆ ಬೇಸರವು ಇತ್ತು. ನೂತನ ತಾಲ್ಲೂಕು ಕಟ್ಟಡದ ಲೋಕಾರ್ಪಣೆಯ ವೇಳೆ ಅಟಲ್ ಜನಸ್ನೇಹಿ ಕೇಂದ್ರ ಆರಂಭವಾಗಿರುವುದು ಅತ್ಯಂತ ಖುಷಿ ನೀಡಿದೆ. ಜನರ ಸೇವೆಗೆ ನಾವು ಸದಾ ಸಿದ್ಧ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಇಂದು ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ನೂತನವಾಗಿ ಆರಂಭಗೊಂಡ ಅಟಲ್ ಜನಸ್ನೇಹಿ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಹೆಬ್ರಿಯ ತಾಲ್ಲೂಕು ಆಡಳಿತಕ್ಕೆ ಸಂಬಂಧಿಸಿದ ಬಹುತೇಕ ಕೆಲಸಗಳು, ಮೂಲ ಸೌಕರ್ಯಗಳನ್ನು ಈಗಾಗಲೆ ಪೂರೈಸಲಾಗಿದೆ. ಮುಂದೆ ತಾಲ್ಲೂಕು ಪಂಚಾಯಿತಿಗೆ ಸುಸಜ್ಜಿತ ಕಚೇರಿ ಕಟ್ಟಡ ನಿರ್ಮಾಣ ಸಹಿತ ಅಭಿವೃದ್ಧಿ ಕೆಲಸವನ್ನು ಅತೀ ಶೀಘ್ರವಾಗಿ ಮಾಡಲಾಗುತ್ತದೆ ಎಂದರು.
ಜನತೆಗೆ ತೀವ್ರವಾಗಿ ಸಮಸ್ಯೆಯಾಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಇತ್ಯರ್ಥ ಪಡಿಸುತ್ತಿದ್ದು, ರಾಜ್ಯದಲ್ಲಿ 6.50 ಲಕ್ಷ ಹೆಕ್ಟೇರ್ ಜಮೀನನ್ನು ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಿ ವಿರಹಿತಗೊಳಿಸಲಾಗುತ್ತಿದೆ, ಇದರಿಂದ ಜನತೆಗೆ ಹಕ್ಕು ಪತ್ರ ನೀಡುವುದು ಮತ್ತು ಸರ್ಕಾರಿ ವ್ಯವಸ್ಥೆಗಳಿಗೆ ಜಮೀನು ಕಾಯ್ದಿರಿಸುವ ಕಾರ್ಯ ಶೀಘ್ರವಾಗಿ ನಡೆಯಲಿದೆ ಎಂದರು.
ಹೆಬ್ರಿ ತಾಲೂಕಿನಲ್ಲಿ ಜನತೆ ಕಂದಾಯ ಸೇವೆಗಳನ್ನು ಪಡೆಯಲು ಕುಂದಾಪುರ ಮತ್ತು ಅಜೆಕಾರಿಗೆ ಹೋಗಬೆಕಿತ್ತು. ಇನ್ನು ಮುಂದೆ ಕಂದಾಯ ಇಲಾಖೆಯ ಸೇವೆಗಳು ತಾಲ್ಲೂಕಿನ 16 ಗ್ರಾಮಗಳ ಜನತೆಗೆ ಇಲ್ಲಿಯೇ ದೊರೆತು ಕೆಲಸಕ್ಕೆ ವೇಗ ದೊರೆಯಲಿದೆ ಎಂದು ತಹಶೀಲ್ದಾರ್ ಪುರಂದರ್ ತಿಳಿಸಿದರು.
ಹೆಬ್ರಿಗೆ ಬಹು ಅಗತ್ಯದ ಅಟಲ್ ಜನಸ್ನೇಹಿ ಕೇಂದ್ರವನ್ನು ಮಂಜೂರುಗೊಳಿಸಿದ ಸಚಿವರನ್ನು ಹೆಬ್ರಿ ತಾಲ್ಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಎಚ್. ಭಾಸ್ಕರ್ ಜೋಯಿಸ್ ಮತ್ತು ಕರಬೆಟ್ಟು ಸಂಜೀವ ಶೆಟ್ಟಿ ಅಭಿನಂದಿಸಿದರು.
ಹೆಬ್ರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕೆ.ಜಿ, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಲವರಿಗೆ ಪಿಂಚಣಿ ಯೋಜನೆ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಪ್ರಕಾಶ್ ಪೂಜಾರಿ ಸ್ವಾಗತಿಸಿ, ನಿರೂಪಿಸಿದರು.