ಉಡುಪಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಎಸ್.ಟಿ. ಘಟಕದ ಸಭೆಯಲ್ಲಿ ಅಧ್ಯಕ್ಷರಾದ ಜಯರಾಮ್ ನಾಯ್ಕ್ ರವರು ವಿವಿಧ ಬ್ಲಾಕ್‌ಗಳ ಹಾಗೂ ಜಿಲ್ಲಾ ಎಸ್.ಟಿ. ಘಟಕದ ಪದಾಧಿಕಾರಿಗಳನ್ನು ಘೋಷಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡುತ್ತಾ, ಬ್ಲಾಕ್ ಸಮಿತಿಗಳು ಸಮುದಾಯವನ್ನು ಒಗ್ಗೂಡಿಸಿಕೊಂಡು ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಆ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದರು.
ಎ.ಐ.ಸಿ.ಸಿ. ಹಾಗೂ ಕೆಪಿಸಿಸಿ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಗ್ರಾಮ ಸ್ವರಾಜ್ಯ ಅಭಿಯಾನವನ್ನು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸಿ ಗಾಂಧಿ ತತ್ವದ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ರೈತ ಪ್ರತಿಭಟನೆ ವೇಳೆ ಕೇಂದ್ರ ಸಚಿವರ ಪುತ್ರನ ಕಾರಿಗೆ ಸಿಲುಕಿ ದುರ್ಮರಣಗೊಂಡ ನಾಲ್ಕು ಜನ ರೈತರ ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರನ್ನು ಬಂಧನಗೊಳಿಸಿದ್ದು ಖಂಡನೀಯ ಎಂದರು. ಜಿಲ್ಲಾ ಎಸ್.ಟಿ. ಘಟಕದ ಅಧ್ಯಕ್ಷರಾದ ಜಯರಾಮ್ ನಾಯ್ಕ್ ಮಾತನಾಡುತ್ತಾ, ನೂತನವಾಗಿ ಆಯ್ಕೆಗೊಂಡ ಬ್ಲಾಕ್ ಅಧ್ಯಕ್ಷರುಗಳು ಶೀಘ್ರದಲ್ಲಿ ಪದಾಧಿಕಾರಿಗಳನ್ನು ನೇಮಿಸಿ ಬ್ಲಾಕ್ ಸಮಿತಿಗಳನ್ನು ರಚಿಸಿಕೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದರು.
ಉಡುಪಿ ಬ್ಲಾಕ್ ಎಸ್.ಟಿ. ಘಟಕದ ಅಧ್ಯಕ್ಷರಾದ ಅನಂತ್ ನಾಯ್ಕ್ ಮಾತನಾಡುತ್ತಾ, ಸರಕಾರದಿಂದ ಪರಿಶಿಷ್ಟ ಪಂಗಡದವರಿಗೆ ದೊರಕುವ ಸವಲತ್ತುಗಳನ್ನು ವಿವರಿಸುವುದರೊಂದಿಗೆ ಸಂಘಟನೆಯನ್ನು ಸದೃಢಗೊಳಿಸುವ ಪ್ರಾಮುಖ್ಯತೆಯ ಬಗ್ಗೆ ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.
ರಾಜ್ಯಸಭಾ ಸದಸ್ಯರಾದ ದಿ. ಓಸ್ಕರ್ ಫೆರ್ನಾಂಡಿಸ್‌ರವರಿಗೆ ಶ್ರದ್ಧಾಂಜಲಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು. ಎಸ್.ಟಿ. ಘಟಕದ ಮಾಜಿ ಅಧ್ಯಕ್ಷರೂ ಜಿಲ್ಲಾ ಕಾಂಗ್ರೆಸ್ ಹಾಲಿ ಕಾರ್ಯದರ್ಶಿ ಸುರೇಶ್ ನಾಯ್ಕ್ ಸ್ವಾಗತಿಸಿ ನೂತನ ಪದಾಧಿಕಾರಿಗಳ ಹೆಸರುಗಳನ್ನು ವಾಚಿಸಿ ವಂದಿಸಿದರು.
ಮುಖಂಡರಾದ ಕೀರ್ತಿ ಶೆಟ್ಟಿ, ಸದಾಶಿವ ದೇವಾಡಿಗ, ದಿನಕರ ಹೇರೂರು, ರಮೇಶ್ ಕಾಂಚನ್, ಉದ್ಯಾವರ ನಾಗೇಶ್ ಕುಮಾರ್, ಸತೀಶ್ ಅಮೀನ್ ಪಡುಕೆರೆ, ರೋಶನ್ ಶೆಟ್ಟಿ, ಪ್ರಶಾಂತ್, ಶುಬದ ರಾವ್, ಎಸ್.ಟಿ ಘಟಕದ ಪದಾಧಿಕಾರಿಗಳಾದ ಸೋಮನಾಥ ನಾಯ್ಕ್, ಶೇಖರ್ ನಾಯ್ಕ್, ವಿಠಲ ನಾಯ್ಕ್, ನವೀನ್ ಕೊರಗ, ದೀಪ ಕೊರಗ, ಕೃಷ್ಣ ನಾಯ್ಕ್ ಬೈಂದೂರು, ಶಿವರಾಮ್ ನಾಯ್ಕ್, ನಾಗಪ್ಪ ಹೊಸೂರು, ಶೇಷು ನಾಯ್ಕ್, ಭುವನೇಶ್ ನಾಯ್ಕ್, ಕೃಷ್ಣ ನಾಯ್ಕ್ ಕಾಪು, ಪ್ರವೀಣ್ ನಾಯ್ಕ್, ಉದಯ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.