ಕೋಟ: ಉಡುಪಿಯ ವೆಂಟನಾ ಫೌಂಡೇಶನ್ ನೇತೃತ್ವದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ರಸ್ತೆಯ ಶ್ರೀ ವಿಷ್ಣುಮೂರ್ತಿ ದೇವಾಸ್ಥಾನ ಸಮೀಪ ಕೊಯ್ಯಾರಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಮುಕ್ತಾಯಗೊಂಡಿದ್ದು ಗ್ರಾಮ ಪಂಚಾಯತಿಗೆ ಹಸ್ತಾಂತರ ಕಾರ್ಯ ನಡೆಯಿತು.
ಮೇ 8ರಂದು ಕೆರೆ ಸ್ವಚ್ಛತೆಗೆ ವೆಂಟನಾ ಫೌಂಡೇಶನ್ ಅಧ್ಯಕ್ಷ ಹಾಗೂ ಉಡುಪಿಯ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆ 99ಗೇಮ್ಸ್ ಆನ್ ಲೈನ್ ಪ್ರೈ.ಲಿ. ನ. ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಭಟ್ ಅವರಿಂದ ಚಾಲನೆ ನೀಡಲಾಗಿತ್ತು. ನಂತರ ಹತ್ತು ದಿನಗಳ ಕಾಲ ನಡೆದ ಸ್ವಚ್ಛತಾ ಕಾರ್ಯದ ಸಂಪೂರ್ಣ ವೆಚ್ಚವನ್ನು ಸೇವಾ ರೂಪದಲ್ಲಿ ಫೌಂಡೇಶನ್ ಮೂಲಕ ನೀಡಲಾಯಿತು.
ವೆಂಟನಾ ಫೌಂಡೇಶನ್ ನ ಸದಸ್ಯೆ ಶೈಲಜಾ ರಾವ್ ಮಾತನಾಡುತ್ತಾ, ಆದಾಯದ ಒಂದು ಭಾಗವನ್ನು ಸಮಾಜದ ಸೇವೆಗೆ ಮೀಸಲಿಡಬೇಕು. ಅಂತೆಯೇ ರೋಹಿತ್ ಭಟ್ ಅವರ ನೇತೃತ್ವದಲ್ಲಿ ಸಮಾನ ಮನಸ್ಕರೊಂದಿಗೆ ವೆಂಟನಾ ಫೌಂಡೇಶನ್ ಸಂಸ್ಥೆಯನ್ನು ಇತ್ತೀಚೆಗೆ ಆರಂಭಿಸಿರುವುದಾಗಿ ತಿಳಿಸಿದರು.
ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ವಿವರಿಸುತ್ತಾ, ಕೆರೆ ಸ್ವಚ್ಛತೆ ಈ ಬಾರಿಯ ಮಹತ್ವಾಕಾಂಕ್ಷೆಯ ಯೋಜನೆ. ಪರಿಸರದ ಕಾಳಜಿಯ ಒಂದು ಭಾಗ ಕೆರೆ ಸ್ಚಚ್ಚತೆ. ಇದರಿಂದ ಸುತ್ತಮುತ್ತಲಿನ ಜಾಗಗಳಿಗೆ ಕೃಷಿ ಕಾರ್ಯಗಳಿಗೆ ನೀರು ವರ್ಷವಿಡಿ ದೊರಕಲಿದೆ ಎಂದರು.
ಫೌಂಡೇಶನ್ ನ ಇನ್ನೋರ್ವ ಸದಸ್ಯ ಸುಧೀರ್ ಮಾತನಾಡುತ್ತಾ, ಚಪ್ಪಾಳೆ ಒಂದು ಕೈಯಿಂದ ಆಗದು. ಫೌಂಡೇಶನ್ ನ ಈ ಕಾರ್ಯಕ್ಕೆ ಸ್ಥಳೀಯರು ಕೈ ಜೋಡಿಸಿ ಸಂಪೂರ್ಣ ಸಹಕಾರದಿಂದ ಹವಾಮಾನ ವೈಪರೀತ್ಯದ ನಡುವೆಯೂ ಶೀಘ್ರವಾಗಿ ಮುಕ್ತಾಯಗೊಳ್ಳಲು ಸಾಧ್ಯವಾಯಿತು ಅಂದರು.
ಸ್ಥಳೀಯರಾದ ರಾಮಚಂದ್ರ ಉಪಾದ್ಯ ಮಾತನಾಡುತ್ತಾ, ಸರಕಾರೇತರ ಸಂಸ್ಥೆಯಾದ ವೆಂಟನಾ ಫೌಂಡೇಶನ್ ಪರಿಸರ ಉಳಿವಿಗಾಗಿ ಕೆರೆ ಸ್ವಚ್ಛತೆಯ ಕಾರ್ಯ ಶ್ಞಾಘನೀಯ. ಅಲ್ಲದೇ ಸ್ವಚ್ಛತೆಯ ನಂತರ ಸುತ್ತಮುತ್ತಲಿನ ಗದ್ದೆಗಳನ್ನು ಮೊದಲಿನಂತೆಯೇ ಸಮತಟ್ಟುಗೊಳಿಸಿ ಮುಂಚಿನಂತೆಯೇ ಹಸ್ತಾಂತರಗೊಳಿಸಿದ್ದು ನಿಮ್ಮ ಪರಿಸರದ ಕಾಳಜಿ ತೋರ್ಪಡಿಸುತ್ತದೆ ಎಂದರು.
ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್. ಆರ್. ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಫೌಂಡೇಶನ್ ಮೂಲಕ ಇನ್ನಷ್ಟು ಯೋಜನೆಗಳಿಂದ ಜನರಿಗೆ ಹಾಗೂ ಪರಿಸರಕ್ಕೆ ಉಪಯೋಗವಾಗಲಿ ಎಂದರು.
ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯರಾಮ್ ಶೆಟ್ಟಿ, ಪಂಚಾಯತ್ ಸಿಬ್ಬಂದಿ ಮಂಜುನಾಥ್, ವಾರ್ಡ್ ಸದಸ್ಯರಾದ ಆನಂದ ಪೂಜಾರಿ, ಇಂಜಿನಿಯರ್ ಶ್ರೀನಿಧಿ ಉಪಾಧ್ಯ, ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಶ್ರೀಧರ್ ಪುರಾಣಿಕ, ಸ್ಥಳೀಯರಾದ ಸುರೇಶ್, ಪ್ರಕಾಶ್, ಬಾಬು, ರಂಜಿತ್, ಶ್ರೀನಿವಾಸ್ ಪೂಜಾರಿ, ಸುಮೇಧ್ ಉಪಸ್ಥಿತರಿದ್ದರು. ಶ್ರೀಧರ್ ಪುರಾಣಿಕ ಸ್ವಾಗತಿಸಿ, ಚಂದ್ರ ಇಂಬಾಳಿ ವಂದಿಸಿದರು.