Tuesday, January 21, 2025
Tuesday, January 21, 2025

ಮಹಿಳೆಯರು ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯ ಪ್ರಕರಣಗಳಿಗೆ ಶೀಘ್ರದಲ್ಲಿಯೇ ಸ್ಪಂದಿಸಿ ನ್ಯಾಯ ಒದಗಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಮಹಿಳೆಯರು ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯ ಪ್ರಕರಣಗಳಿಗೆ ಶೀಘ್ರದಲ್ಲಿಯೇ ಸ್ಪಂದಿಸಿ ನ್ಯಾಯ ಒದಗಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Date:

ಉಡುಪಿ: ಜಿಲ್ಲೆಯಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ಬಗ್ಗೆ ಮಾಹಿತಿ ಅಥವಾ ದೂರುಗಳು ಬಂದಲ್ಲಿ ಅವುಗಳಿಗೆ ಕೂಡಲೇ ಸ್ಪಂದಿಸಿ, ಅವರುಗಳಿಗೆ ಆತ್ಮಸ್ಥೈರ್ಯ ತುಂಬಿ, ಸಾಂತ್ವನ ಹೇಳುವುದರ ಜೊತೆಗೆ ಕಾನೂನಿನಲ್ಲಿ ಸಿಗುವ ನೆರವು ಒದಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮಿತಿ ಸಭೆಯ ಹಾಗೂ ಸಮಗ್ರ ಮಕ್ಕಳ ರಕ್ಷಣಾ ಘಟಕದ ವಿವಿಧ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿ ದುರ್ಬಲರಾದ ಮಹಿಳೆಯರು ಹಾಗೂ ಮಕ್ಕಳ ಮೇಲೆ ಸಾಮಾನ್ಯವಾಗಿ ದಬ್ಬಾಳಿಕೆ ಹಾಗೂ ದೌರ್ಜನ್ಯಗಳು ಆಗುತ್ತಿರುತ್ತವೆ. ಇವುಗಳನ್ನು ಎದುರಿಸುವ ಶಕ್ತಿ ಅವರಲ್ಲಿ ಇರುವುದಿಲ್ಲ. ಅವರು ತೊಂದರೆಗೊಳಗಾದ ಬಗ್ಗೆ ಮಾಹಿತಿಗಳು ಕಂಡುಬಂದಲ್ಲಿ ಅವರಿಗೆ ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು ಎಂದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ತಾಲೂಕುಗಳ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳು ಪ್ರಸವ ಪೂರ್ವ ಸ್ಕ್ಯಾನಿಂಗ್‌ಗೆ ಬರುತ್ತಿದ್ದಾರೆ ಎಂದ ಅವರು, ಬಾಲ್ಯ ವಿವಾಹ ಪ್ರಕರಣಗಳನ್ನು ಇತರ ಇಲಾಖೆ ಹಾಗೂ ಸಾರ್ವಜನಿಕರ ಸಹಾಯದಿಂದ ತಡೆಯಲು ಮುಂದಾಗಬೇಕು ಎಂದರು.

ಬಾಲ್ಯವಿವಾಹದಂತಹ ಪ್ರಕರಣಗಳು ಸಾಮಾನ್ಯವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಆಗಿರುವ ಸಾಧ್ಯತೆ ಇರುತ್ತದೆ. ಜಿಲ್ಲೆಯಲ್ಲಿ 28 ಹೆಣ್ಣುಮಕ್ಕಳು ಶಾಲೆಯಿಂದ ಹೊರಗಿರುವುದು ಕಂಡುಬಂದಿದೆ. ಅವರಲ್ಲಿ ಹೆಚ್ಚಾಗಿ ಕೊರಗ ಜನಾಂಗದ ಹೆಣ್ಣುಮಕ್ಕಳು ಇದ್ದಾರೆ. ಅವರು ಶಾಲೆಗೆ ಮರಳಿ ಬರುವಂತೆ ಮನವೊಲಿಸುವ ಕಾರ್ಯಕ್ಕೆ ಶಿಕ್ಷಣ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಮಾದಕ ವಸ್ತು ಸೇವನೆ ನಿಷೇಧ ಕಾಯ್ದೆಯನ್ನು ಸಮರ್ಪಕ ಅನುಷ್ಠಾನಗೊಳಿಸುವುದರೊಂದಿಗೆ ಜಿಲ್ಲೆಯನ್ನು ನಶಾ ಮುಕ್ತವಾಗಿಸಬೇಕು. ಯುವ ಜನರು ಹೆಚ್ಚಾಗಿ ಇಂತಹ ವ್ಯಸನಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದ ಅವರು ಇದರಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಪೊಲೀಸ್ ಇಲಾಖೆಯವರು ಈ ಹಿಂದೆ ದೂರು ದಾಖಲಾದ ಸ್ಥಳಗಳಲ್ಲಿ ನಿಗಾವಹಿಸಬೇಕೆಂದು ಸೂಚಿಸಿದರು.

ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯವಾಗಿದೆ. ಈವರೆಗೂ ಸಮಿತಿ ರಚಿಸದೇ ಇರುವ ಇಲಾಖೆ ಅಥವಾ ಸಂಸ್ಥೆಗಳ ವರದಿ ಪಡೆದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಉಡುಪಿ ತಾಲೂಕು ಕಟಪಾಡಿಯ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ಕೈಗೊಂಡಿರುವ ಉದ್ಯೋಗಸ್ಥ ಮಹಿಳೆಯರ ವಸತಿಗೃಹ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಇದಕ್ಕೆ ಅಗತ್ಯವಿರುವ ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದರು.

ಮಕ್ಕಳ ವಿಶೇಷ ಪಾಲನೆಯಡಿಯಲ್ಲಿ 346 ಫಲಾನುಭವಿಗಳಿಗೆ ಪ್ರತಿ ಮಾಹೆ 1000 ರೂ. ಗಳನ್ನು 18 ವರ್ಷ ಪೂರ್ಣಗೊಳ್ಳುವವರೆಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ. ಎಂದ ಅವರು ಏಕ ಪೋಷಕ ಮಕ್ಕಳಿಗೆ, ಒಡೆದ ಕುಟುಂಬಗಳ ಹಾಗೂ ಲೈಂಗಿಕ ಕಾರ್ಯಕರ್ತರ ಮಕ್ಕಳಿಗೆ ಮತ್ತು ಕೋವಿಡ್ ಇಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಇಲಾಖೆ ಇಂದ ನೀಡುವ ಆರ್ಥಿಕ ಸೌಲಭ್ಯವು ಪ್ರತಿಯೊಬ್ಬರಿಗೂ ಸಿಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಪ್ರಸ್ತುತ ವರ್ಷದಲ್ಲಿ ಜಿಲ್ಲೆಯಲ್ಲಿ 27 ಫೋಕ್ಸೋ ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 18 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿದ್ದು 8 ಪ್ರಕರಣಗಳು ತನಿಖೆಯಲಿದ್ದು 1 ಪ್ರಕರಣವನ್ನು ಇತರ ಜಿಲ್ಲೆಗೆ ವರ್ಗಾಯಿಸಲಾಗಿದೆ ಎಂದ ಅವರು ಬಾಕಿ ಉಳಿದ 8 ಪ್ರಕರಣಗಳ ತನಿಖೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಬೇಕೆಂದು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಮುಂದೆ 165 ಪ್ರಕರಣಗಳು ಪ್ರಸ್ತುತ ಸಾಲಿಗೆ ದಾಖಲಾಗಿದ್ದು ಬಾಕಿ ಉಳಿದು ಸೇರಿದಂತೆ ಒಟ್ಟ 172 ಪ್ರಕರಣಗಳಲ್ಲಿ 163 ಪ್ರಕರಣಗಳು ಇತ್ಯರ್ಥಗೋಂಡಿದ್ದು 9 ಪ್ರಕರಣಗಳು ಸಮಿತಿಯ ಮುಂದೆ ಇವೆ ಎಂದ ಅವರು ಪ್ರಕರಣಗಳ ಸಂಖ್ಯೆ ಹೆಚ್ಚು ಆಗದಂತೆ ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಿ ಜೊತೆಗೆ ಆಪ್ತ ಸಮಾಲೋಚಕರನ್ನು ಸಹ ಪ್ರತೀ ಶಾಲೆಗೆ ನೇಮಿಸಬೇಕು ಎಂದ ಅವರು ಮಕ್ಕಳು ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ದೂರು ಪೆಟ್ಟಿಗೆಗಳನ್ನು ಸ್ಥಾಪಿಸಿ, ಅವುಗಳಲ್ಲಿನ ದೂರುಗಳ ಪರಿಶೀಲನೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ಮಾಡುವಂತೆ ಆಗಬೇಕು ಎಂದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಎ.ಎಸ್.ಪಿ ಎಸ್.ಟಿ ಸಿದ್ಧಲಿಂಗಪ್ಪ, ಡಾ.ಪಿ.ವಿ ಭಂಡಾರಿ, ಶಿಶು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ವಿವಿಧ ಎನ್.ಜಿ.ಓ ಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!