ಉಡುಪಿ: ಅತೀ ವೇಗ, ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿ, ಅಪಘಾತಪಡಿಸಿ, ಸಾವಿಗೆ ಕಾರಣವಾದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2017 ಜನವರಿ 09 ರಂದು ಬೆಳಗ್ಗೆ 5.20 ಸುಮಾರಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ಹೈವೆ ಗ್ಯಾರೇಜ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಭಾಕರ ಎಂಬಾತನು ಕೆನರಾ ಟೂರಿಸ್ಟ್ ಬಸ್‌ನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ, ರಸ್ತೆ ಬದಿ ನಿಂತಿದ್ದ ನಾಗರಾಜ ಎಂಬಾತನಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುವ ಹಿನ್ನೆಲೆ, ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ ಪ್ರಕಾಶ್ ಅವರು, ಆರೋಪಿ ಪ್ರಭಾಕರ್‌ಗೆ 2 ವರ್ಷದ ಕಾರಾಗೃಹ ವಾಸ ಶಿಕ್ಷೆ ಹಾಗೂ 10000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ. ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿರುತ್ತಾರೆ.