ಉಡುಪಿ: ಅತಿವೇಗ, ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿ, ಹಿಂಬದಿ ಕುಳಿತಿದ್ದ ಮಹಿಳೆಯ ಸಾವಿಗೆ ಕಾರಣವಾದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2017 ಅಕ್ಟೋಬರ್ 21 ರಂದು ಸಂಜೆ 5.15 ರ ಸುಮಾರಿಗೆ ಪ್ರತಾಪ ಸುದರ್ಶನ ಶೆಟ್ಟಿ ಎಂಬಾತನು ಜಯಲಕ್ಷ್ಮೀ ಎಂಬ ಮಹಿಳೆಯನ್ನು ಬೈಕಿನ ಹಿಂಬದಿ ಕೂರಿಸಿಕೊಂಡು, ಅತಿವೇಗ, ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸುತ್ತಿದ್ದಾಗ, ಉಡುಪಿ ತಾಲೂಕು ಪುತ್ತೂರು ಗ್ರಾಮದ ರೊಬೋಸಾಫ್ಟ್ ಟೆಕ್ನಾಲಜೀಸ್ ಪ್ರೈ ಲಿ ಕಂಪನಿಯ ಎದುರು ಚಂದ್ರಾವತಿಯವರು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ತರುಚಿದ ಗಾಯವಾಗಿರುತ್ತದೆ.
ಬೈಕ್‌ನಲ್ಲಿ ಸಹ ಸವಾರಳಾಗಿದ್ದ ಜಯಲಕ್ಷ್ಮೀಯವರು ರಸ್ತೆಗೆ ಬಿದ್ದು, ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆರೋಪಿಯು ಅಪಘಾತದ ನಂತರ ಬೈಕನ್ನು ನಿಲ್ಲಿಸದೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೇ ಸ್ಥಳದಿಂದ ಪರಾರಿಯಾಗಿರುವ ಹಿನ್ನೆಲೆ, ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ ಪ್ರಕಾಶ್ ಅವರು ಆರೋಪಿ ಪ್ರತಾಪ ಸುದರ್ಶನ ಶೆಟ್ಟಿಗೆ 2 ವರ್ಷದ ಕಾರಾಗೃಹ ವಾಸ ಶಿಕ್ಷೆ ಹಾಗೂ 11500 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ. ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿರುತ್ತಾರೆ.