ಉಡುಪಿ: ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಎ ಹಾದುಹೋಗುವ ಕಲ್ಸಂಕ ಜಂಕ್ಷನ್ ನಲ್ಲಿ ಅತಿಯಾದ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಸಮಸ್ಯೆಗಳು ಉಂಟಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್ ನಲ್ಲಿ ಸರ್ಕಲ್ ರಚಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳ ಜೊತೆ ಶಾಸಕ ಕೆ. ರಘುಪತಿ ಭಟ್ ಸಭೆ ನಡೆಸಿ ಚರ್ಚಿಸಿದರು.
ಈ ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಎ ಹಾದು ಹೋಗುವ ಪರ್ಕಳ ಪೇಟೆಯಿಂದ ಮಣಿಪಾಲ, ಉಡುಪಿ ನಗರದವರೆಗೆ ನಗರ ಪ್ರದೇಶವಾಗಿದ್ದು, ಉಡುಪಿ ಕೃಷ್ಣಮಠವನ್ನು, ಮಲ್ಪೆಯನ್ನು ಹಾಗೂ ಬೆಂಗಳೂರು – ಮಂಗಳೂರು – ಮುಂಬಯಿ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ವಾಹನಗಳು ಈ ರಸ್ತೆಯಲ್ಲಿ ಹಾದು ಹೋಗುತ್ತಿರುತ್ತದೆ. ವಿಶ್ವವಿಖ್ಯಾತ ಶ್ರೀ ಕೃಷ್ಣಮಠಕ್ಕೆ ಬರುವ ಯಾತ್ರಿಕರ ವಾಹನಗಳು ಈ ಕಲ್ಸಂಕ ಜಂಕ್ಷನ್ ನಲ್ಲಿ ತಿರುವನ್ನು ಪಡೆಯುತ್ತಿದೆ.
ಉಡುಪಿ ಕಲ್ಸಂಕ ಜಂಕ್ಷನ್ ನಲ್ಲಿ ಅತಿಯಾದ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನಗಳು ತಡೆಯಿಲ್ಲದೆ ಸಂಚರಿಸುವಂತಾಗಲು ಶಾಸಕ ಕೆ. ರಘುಪತಿ ಭಟ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸರ್ಕಲ್ ರಚಿಸುವ ಬಗ್ಗೆ ತಿಳಿಸಿರುವಂತೆ ಈ ಯೋಜನೆಯ ಅಂದಾಜು ವೆಚ್ಚಗಳ ಸಹಿತ ಪ್ರಾಯೋಗಿಕ ನೀಲನಕ್ಷೆಯನ್ನು ತಯಾರಿಸಿ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ನಾಯ್ಕ್ ಹಾಗೂ ಸಹಾಯಕ ಅಭಿಯಂತರರಾದ ಮಂಜುನಾಥ್ ನಾಯಕ್ ಅವರು ವಿವರಗಳನ್ನು ನೀಡಿ ಚರ್ಚಿಸಿದರು.
ನೀಲನಕ್ಷೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಸಾರ್ವಜನಿಕವಾಗಿ ಯಾವುದೇ ಸಮಸ್ಯೆಗಳು ಉಂಟಾಗದೆ ಎಲ್ಲಾ ದಿಕ್ಕುಗಳಿಂದ ಬರುವ ವಾಹನಗಳು ಕಲ್ಸಂಕ ಜಂಕ್ಷನ್ ನಲ್ಲಿ ಯಾವುದೇ ತಡೆಯಿಲ್ಲದೆ ಸಂಚರಿಸುವಂತಾಗಲು ರೂ. 30.00 ಕೋಟಿ ವೆಚ್ಚದ ಸಮರ್ಪಕವಾದ ಸರ್ಕಲ್ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ತಯಾರಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.