ಕೋಟ: ಪುಸ್ತಕಗಳು ಮನುಷ್ಯನ ಬದುಕನ್ನು ಸಮರ್ಥವಾಗಿ ಸಾಗಿಸಬಹುದಾದ ದಾರಿದೀಪ ನೀಡುವ ಒಂದು ವಸ್ತು. ನಮಗೆ ಅವಶ್ಯಕತೆಗೆ ತಕ್ಕಂತೆ ಜ್ಞಾನ ನೀಡುವ ಶಕ್ತಿ ಪುಸ್ತಕಗಳಿಗಿದೆ. ಮಕ್ಕಳು ವಿದ್ಯಾರ್ಥಿ ಜೀವನದಿಂದಲೇ ಹೆಚ್ಚು ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ನಿಮ್ಮ ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಕಾರಂತ ಪ್ರತಿಷ್ಠಾನ (ರಿ.) ಕೋಟ ಇದರ ಟ್ರಸ್ಟಿ ಇಬ್ರಾಹಿಂ ಸಾಹೇಬ್ ಕೋಟ ಹೇಳಿದರು.
ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆ ಆಶ್ರಯದಲ್ಲಿ ನಡೆಯುತ್ತಿರುವ ದಿ. ಕೆ.ಸಿ ಕುಂದರ್ ಸ್ಮರಣಾರ್ಥ ನರೇಂದ್ರ ಕುಮಾರ್ ಕೋಟ ಸಾರಥ್ಯದಲ್ಲಿ ಉಚಿತ ಬೇಸಿಗೆ ಶಿಬಿರ ಗಮನ- 2022 (ಮಕ್ಕಳ ಹಬ್ಬದ ದಿಮ್ಸಾಲ್) ಕಾರ್ಯಕ್ರಮ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯದ ವತಿಯಿಂದ ನಡೆದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾನಾಡುತ್ತಿದ್ದರು.
ಗ್ರಂಥಾಲಯದ ಮೇಲ್ವಿಚಾರಕಿ ಶೈಲಜಾ ಕೆ ಎನ್ ಪ್ರಸ್ತಾವಿಕ ಮಾತನಾಡಿ, ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪ್ರದರ್ಶನ, ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ, ಅಲ್ಲದೇ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳು ಲಭ್ಯವಿದ್ದು ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಹಂದಟ್ಟು ವಹಿಸಿದ್ದರು. ಈ ಸಂದರ್ಭದಲ್ಲಿ ಶಿಬಿರದ ಸಹನಿರ್ದೇಶಕ ಕುಮಾರ್ ಸಾಲಿಗ್ರಾಮ, ಚಿತ್ರಕಲಾ ಶಿಕ್ಷಕ ಗಿರೀಶ್ ವಕ್ವಾಡಿ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್, ಶಿಬಿರದ ತಂಡದ ನಾಯಕರು ಉಪಸ್ಥಿತರಿದ್ದರು.