ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ. ಕೃಷ್ಣನು ತನ್ನ ಸಂಗಡಿಗರೊಂದಿಗೆ ಬಾಲಲೀಲೆಗಳ ಮುಖಾಂತರ ಎಲ್ಲರ ಮನಸೆಳೆದವನು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಶ್ರೀ ಕೃಷ್ಣನ ಫ್ರೆಂಡ್ಸ್ ಇದ್ದಂತೆ. ಇಂದು ಶ್ರೀ ಕೃಷ್ಣನ ಅಂಗಳದಲ್ಲಿ ಸ್ಕೌಟ್ ಮತ್ತು ಬುಲ್ ಬುಲ್ ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ಅವನ ಕೃಪೆಗೆ ಪಾತ್ರರಾಗಿದ್ದಾರೆ. ಅವರನ್ನು ಕೃಷ್ಣ ಸದಾ ಅನುಗ್ರಹಿಸಲಿ ಎಂದು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು. ಜಿಲ್ಲಾಮಟ್ಟದ ಕಬ್ ಬುಲ್ ಬುಲ್ ಉತ್ಸವವನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸ್ಕೌಟಿಂಗ್ ಚಳುವಳಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವಂತೆ ಕರೆ ನೀಡಿದರು. ಒಂದು ದಿನದ ಕಬ್ ಬುಲ್ ಬುಲ್ ಉತ್ಸವದಲ್ಲಿ ಮಕ್ಕಳಿಗೆ ವಿವಿಧ ತರಬೇತಿಗಳು, ಮಾಹಿತಿಗಳು, ಆಟೋಟಗಳು ಮುಂತಾದ ಕಾರ್ಯಕ್ರಮಗಳು ಹಮ್ಮಿ ಕೊಳ್ಳಲಾಗಿತ್ತು.
ಜಿಲ್ಲಾ ಸ್ಕೌಟ್ ಅಯುಕ್ತರಾದ ಜನಾರ್ದನ್ ಕೊಡವೂರು, ಶ್ರೀ ಮಠದ ರಮೇಶ್ ಭಟ್, ಜಿಲ್ಲಾ ಉಪಾಧ್ಯಕ್ಷರಾಗಿರುವ ಎಡ್ವಿನ್ ಆಳ್ವ, ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ ಅಡಿಗ, ಜಿಲ್ಲಾ ತರಬೇತಿ ಆಯುಕ್ತ ಉದಯ ಭಾಸ್ಕರ್ ಶೆಟ್ಟಿ, ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಶೆಟ್ಟಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನಾ ಶೇಖರ್ ಉಪಸ್ಥಿತರಿದ್ದರು.