ಉಡುಪಿ, ಫೆ.21: ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗು ಉಡುಪಿ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವಿಕಾಸಕ್ಕಾಗಿ ಜಾನಪದ ಎಂಬ ಜಾನಪದ ಸಂಗೀತ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟಕರಾದ ಪ್ರಾಂಶುಪಾಲೆ ಪ್ರೊ. ಆಶಾ ಕುಮಾರಿ, ಜಾನಪದ ಭಾಷೆ ಮನಸ್ಸಿನ ಭಾಷೆಯಾಗಿದೆ. ಜಾನಪದ ದೇವರ ಇರುವಿಕೆಯನ್ನು ಮತ್ತು ಪ್ರಕೃತಿಯ ಅಸ್ಮಿತೆಯನ್ನು ತೋರಿಸುತ್ತದೆ ಹಾಗೆಯೇ ಜಾನಪದ ಸಾಹಿತ್ಯ ಭಾವನಾತ್ಮಕವಾಗಿದೇ, ಧಾರ್ಮಿಕ ಲೇಪನವಿದೆ, ಬದುಕಿನ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರವಿದೆ ಎಂದರು. ಈಗಿನ ಯುವ ಜನತೆ ಜಾನಪದದ ಒಳಹೊಕ್ಕು ಜೀವನ ಶೈಲಿಯನ್ನು ರೂಪಿಸಿಕೊಂಡಲ್ಲಿ ಆರೋಗ್ಯಕರ ಜೀವನ ನಡೆಸಬಹುದು ಎಂದು ಉದಾಹರಣೆ ಮುಖೇನ ವಿವರಿಸಿದರು.
ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕ ನುಡಿಯಲ್ಲಿ ಇನ್ನೊಬ್ಬರ ಒಳತಿಗಾಗಿ ಹಾರೈಸುವ ಸಂಸ್ಕೃತಿ ಜಾನಪದದ್ದಾಗಿದೆ ಎಂದು ವಿವಿಧ ಜಾನಪದ ಗೀತೆಗಳನ್ನು ಹಾಡುವ ಮೂಲಕ ಜಾನಪದದ ಪ್ರಸ್ತುತತೆ ಅರಿವು ಮೂಡಿಸಿದರು. ಕುಂದಾಪುರ ನೇರಳಕಟ್ಟೆ ಯೋಗಗುರು ಪ್ರಸ್ತುತ ವಿಯೆಟ್ನಾಮ್ ನಲ್ಲಿ ಯೋಗ ಶಿಕ್ಷಕರಾಗಿರುವ ದೇವರಾಜ್ ದೇವಾಡಿಗ ಅವರನ್ನು ಉಡುಪಿ ಜಿಲ್ಲಾ ಘಟಕದ ಪರವಾಗಿ ಸನ್ಮಾನಿಸಲಾಯಿತು. ಉಡುಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಾಯ ಕಾಮತ್, ಪದಾಧಿಕಾರಿ ಪ್ರಭಾ ರಾವ್ ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ ಜಿ ವಂದಿಸಿದರು. ಉಡುಪಿ ಜಿಲ್ಲಾ ಪ್ರ. ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಡಾ. ಗಣೇಶ್ ಗಂಗೊಳ್ಳಿ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು.