ಉಡುಪಿ, ಫೆ.19: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಮತ್ತು ಉಡುಪಿ ಜಿಲ್ಲಾ ಶಾಖೆ, ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು, ಸಿ.ಎಸ್.ಐ. ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಲಯನ್ಸ್ ಕ್ಲಬ್, ಉಡುಪಿ ಮಿಡ್ ಟೌನ್ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಮತ್ತು ಆಯ್ದ ಬಡ ಫಲಾನುಭವಿಗಳಿಗೆ ಉಚಿತ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮ ಫೆಬ್ರವರಿ 21 ರಂದು ಬೆಳಗ್ಗೆ 10 ಗಂಟೆಗೆ ನಗರದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಉದ್ಘಾಟಿಸಲಿದ್ದು, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಲೂಯಿಸ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿ.ಎಸ್.ಐ. ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ದೇರಳಕಟ್ಟೆ ಯೆನಪೋಯ ಕಾಲೇಜಿನ ಡಾ.ರಚನಾ ಪ್ರಭು, ಹಿರಿಯ ನಾಗರಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ನಾಗರಾಜ್ ರಾವ್, ರೆಡ್‌ಕ್ರಾಸ್ ಆಡಫಿತ ಮಂಡಳಿಯ ಸದಸ್ಯ ಲಯನ್ ವಿ.ಜಿ ಶೆಟ್ಟಿ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.
ಹಿರಿಯ ನಾಗರಿಕರು ಮತ್ತು ಸಾರ್ವಜನಿಕರಿಗೆ ಉಚಿತ ಸ್ತ್ರೀರೋಗ ಮ್ಯಾಮೊಗ್ರಾಫಿ ಪರೀಕ್ಷೆ, ಪ್ಯಾಪ್ ಸ್ಮೀಯರ್ ಪರೀಕ್ಷೆ (ಗರ್ಭ ಕೋಶ ಕಂಠ ಪರೀಕ್ಷೆ – ಸುಸಜ್ಜಿತ ಹೈಟೆಕ್ ಮೊಬೈಲ್ ಬಸ್ಸುನಲ್ಲಿ ತಪಾಸಣೆ), ಹೃದಯ ಸಂಬಂಧಿತ ಕಾಯಿಲೆಗಳು, ಮಧುಮೇಹ ತಪಾಸಣೆ – ಖಾಲಿ ಹೊಟ್ಟೆ ಮತ್ತು ಆಹಾರ ಸೇವಿಸಿದ ನಂತರ, ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ, ಕೀಲು ಮತ್ತು ಎಲುಬು, ದಂತ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುವುದು. ಮಿಷನ್ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ದೀಪಾ ವೈ. ರಾವ್, ಡಾ. ಪವಿತ್ರ ಹಾಗೂ ಡಾ. ಅಕ್ಷತಾ, ನೇತ್ರ ತಜ್ಞರಾದ ಡಾ. ಅಭಿನಯ್ ಅಶೋಕ್, ಕೀಲು ಮತ್ತು ಎಲುಬು ತಜ್ಞರಾದ ಡಾ. ಅರ್ಜುನ್ ಬಳ್ಳಾಲ್, ಸಾಮಾನ್ಯ ಆರೋಗ್ಯ ತಜ್ಞರಾದ ಡಾ. ಧನಂಜಯ ಭಟ್ ಹಾಗೂ ಡಾ. ಗಣೇಶ್ ಕಾಮತ್ ಮತ್ತು ದಂತ ತಜ್ಞರಾದ ಡಾ. ನಾಗೇಶ್ ನಾಯಕ್ ಹಾಗೂ ಡಾ. ಸಾರಿಕಾ ಭಾಗವಹಿಸಿ, ಸಾರ್ವಜನಿಕರನ್ನು ತಪಾಸಣೆ ನಡೆಸಲಿದ್ದು, ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2532222, 8310311448 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.