Saturday, February 22, 2025
Saturday, February 22, 2025

ಯುವಜನರ ಕೌಶಲ್ಯ ಹೊರತರುವಲ್ಲಿ ಉದ್ಯೋಗ ಮೇಳಗಳು ಮಹತ್ತರ ಪಾತ್ರ ವಹಿಸುತ್ತವೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ಯುವಜನರ ಕೌಶಲ್ಯ ಹೊರತರುವಲ್ಲಿ ಉದ್ಯೋಗ ಮೇಳಗಳು ಮಹತ್ತರ ಪಾತ್ರ ವಹಿಸುತ್ತವೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

Date:

ಉಡುಪಿ, ಫೆ.19: ಭಾರತ ದೇಶವು ಜಗತ್ತಿನಲ್ಲಿ ಅತಿ ಹೆಚ್ಚು ಯುವ ಸಂಪತ್ತನ್ನು ಹೊಂದಿರುವ ರಾಷ್ಟ್ರವಾಗಿದ್ದು, ಸೃಜನಾತ್ಮಕ ಕೌಶಲ್ಯಗಳನ್ನು ನಮ್ಮ ಯುವಪೀಳಿಗೆ ಹೊಂದಿದ್ದಾರೆ. ಅವರುಗಳ ಕೌಶಲ್ಯವನ್ನು ಹೊರತರುವಲ್ಲಿ ಉದ್ಯೋಗ ಮೇಳಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬುಧವಾರ ನಗರದ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೌಶಲ್ಯ ರೋಜ್‌ಗಾರ್ ಮೇಳ – ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿರುವ ಯಾವುದೇ ಸರ್ಕಾರಿ ಹುದ್ದೆಯನ್ನು ಯಾರೂ ಕೂಡ ಶಿಫಾರಸ್ಸು ಮಾಡಿ, ನೀಡಲು ಸಾಧ್ಯವಿಲ್ಲ. ಸ್ವಂತ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯಲ್ಲಿ ನಾವುಗಳು ಇದ್ದೇವೆ. ಉದ್ಯೋಗ ಮೇಳಗಳು ನಿರುದ್ಯೋಗಿಗಳಿಗೆ ಸಹಕಾರಿಯಾಗಿದ್ದು, ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದರ ಜೊತೆಗೆ ಅವರ ಆರ್ಥಿಕ ಸಬಲೀಕರಣಕ್ಕೂ ಅನುಕೂಲವಾಗಲಿದೆ ಎಂದರು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ಉದ್ಯೋಗ ಪತ್ರ ನೀಡಿದ ಅಭ್ಯರ್ಥಿಗಳಿಗೆ ಕನಿಷ್ಠ ಹದಿನೈದು ದಿನಗಳ ಒಳಗಾಗಿ ಉದ್ಯೋಗ ನೀಡಿದ್ದಲ್ಲಿ, ಉದ್ಯೋಗ ಮೇಳಗಳು ಸಾರ್ಥಕವಾಗುತ್ತದೆ ಎಂದ ಅವರು, ಉದ್ಯೋಗಾಕಾಂಕ್ಷಿಗಳ ಅರ್ಹತೆಗೆ ಅನುಗುಣವಾಗಿ ಕೆಲಸ ಸಿಗುವಂತಾಗಲಿ ಎಂದು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದ್ದು, ಉದ್ಯೋಗ ದೊರಕುವುದೇ ಕಷ್ಟದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗ ಮೇಳಗಳ ಆಯೋಜನೆ ಅತ್ಯವಶ್ಯಕವಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಆತಂಕಕ್ಕೆ ಒಳಪಡದೇ ಸಂದರ್ಶನವನ್ನು ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಎದುರಿಸಬೇಕು ಎಂದ ಅವರು, ಸ್ವ-ಉದ್ಯೋಗ ಹೊಂದಲು ಆಸಕ್ತರಿರುವವರಿಗೆ ಸಾಕಷ್ಟು ಅವಕಾಶಗಳಿವೆ. ಸರಕಾರದ ವತಿಯಿಂದ ಸಾಲ ಸೌಲಭ್ಯ ಹಾಗೂ ಸಹಾಯಧನವನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಅಭ್ಯರ್ಥಿಗಳು ಉದ್ಯೋಗ ಮೇಳದ ಸಂದರ್ಶನದಲ್ಲಿ ತಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎ. ಶ್ರೀನಿವಾಸರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಇಲಾಖೆಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕೌಶಲ್ಯಾಭಿವೃದ್ಧಿ ನಿಗಮವನ್ನು 2016 ರಲ್ಲಿ ಆರಂಭಿಸಲಾಯಿತು. ಆ ಮೂಲಕ 16 ರಿಂದ 35 ವರ್ಷದೊಳಗಿನ ಯುವಕ ಯುವತಿಯರಿಗೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ, ಉದ್ಯೋಗ ಅವಕಾಶ ಕಲ್ಪಿಸುವುದು ನಿಗಮದ ಮಹತ್ತರ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆಯು ಶಿಕ್ಷಣ ಕಾಶೀ ಎಂದೇ ಹೆಸರುವಾಸಿಯಾಗಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳಿಂದ ಸ್ವಂತ ಉದ್ಯೋಗ ಕೈಗೊಂಡು ತಮ್ಮ ಜಿಲ್ಲೆಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ 2022-23 ನೇ ಸಾಲಿನಲ್ಲಿ ಸಿ.ಎಂ.ಕೆ.ಕೆ.ವೈ ಯೋಜನೆಯಡಿ ಸೆಲ್ಫ್ ಎಂಪ್ಲಾಯ್‌ಮೆಂಟ್ ಟೈಲರ್ ಜಾಬ್ ರೋಲ್‌ನಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಟೂಲ್‌ಕಿಟ್ ಅನ್ನು ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಡಾ. ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಪ್ರಸಾದ್, ಉದ್ಯೋಗದಾತರು, ಉದ್ಯೋಗಾಕಾಂಕ್ಷಿಗಳು, ಸಿ.ಎಂ.ಕೆ.ಕೆ.ವೈ ಯೋಜನೆಯ ಫಲಾನುಭವಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೀಕ್ಷಿತ್ ಶೆಟ್ಟಿ ನಿರೂಪಿಸಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ವಂದಿಸಿದರು. ಉದ್ಯೋಗ ಮೇಳದಲ್ಲಿ 2000 ಕ್ಕೂ ಅಧಿಕ ಮಂದಿ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು, 40 ಕ್ಕೂ ಹೆಚ್ಚು ಪ್ರತಿಷ್ಟಿತ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗಕ್ಕೆ ಸಂದರ್ಶನ ನಡೆಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಡ್ವಕೇಟ್‌ ಡಿ. ಕೆ. ಶೆಟ್ಟಿ ನೋಟರಿ ಪಬ್ಲಿಕ್‌ ಆಗಿ ನೇಮಕ

ಮುಂಬಯಿ, ಫೆ.21: ಮುಂಬಯಿಯ ಹಿರಿಯ ವಕೀಲ ಅಡ್ವಕೇಟ್‌ ಡಿ. ಕೆ. ಶೆಟ್ಟಿ...

ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ ಅಧಿಕಾರಿಗಳೊಂದಿಗೆ ಸಭೆ

ಉಡುಪಿ, ಫೆ.21: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಚರಿಸುವ ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ...

ಆಗಮಡಂಬರ ಕೃತಿ ಲೋಕಾರ್ಪಣೆ

ಉಡುಪಿ, ಫೆ.21: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ...

ವಿಕಾಸಕ್ಕಾಗಿ ಜಾನಪದ

ಉಡುಪಿ, ಫೆ.21: ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ...
error: Content is protected !!