ಸಾಸ್ತಾನ, ಫೆ.19: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ, ವೈದ್ಯರ ಸಲಹೆ ಕಡ್ಡಾಯವಾಗಿ ಪಡೆಯಿರಿ ಎಂದು ಕೋಟದ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಕೋಟ ಮಾಧವ ಪೈ ಹೇಳಿದರು ಸಾಸ್ತಾನದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಮತ್ತು ಕೋಟದ ಪಂಚವರ್ಣ ಮಹಿಳಾ ಮಂಡಲ ಜಂಟಿ ಆಶ್ರಯದಲ್ಲಿ ಅರಿವು ನಿಮಗಿರಲಿ ನೆರವು ೧೩ನೇ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಆಹಾರ ಪದ್ಧತಿ ನಮ್ಮಿಂದಲೇ ಬದಲಾಗಿದೆ. ಇದು ಹಲವು ರೀತಿಯ ಖಾಯಿಲೆಗಳ ಆಹ್ವಾನಕ್ಕೆ ಕಾರಣವಾಗಿದೆ. ಪ್ರಸ್ತುತ ಜಂಕ್ ಫುಡ್ ಹಾವಳಿಯಿಂದ ವ್ಯತಿರಿಕ್ತ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ ಅಲ್ಲದೆ ಹೊಸ ಹೊಸ ಖಾಯಿಲೆಗಳಿಗೆ ಆಹ್ವಾನ ನೀಡುವಂತ್ತಾಗಿದೆ. ಹಿಂದಿನ ಕಾಲದ ಆಹಾರ ಪದ್ಧತಿ ಉತ್ತಮ ಆರೋಗ್ಯಕ್ಕೆ ಭದ್ರ ಬುನಾದಿಯ ಹಾಗಿತ್ತು ಎಂದರು.
ಸಾಸ್ತಾನ ಕೆನರಾ ಬ್ಯಾಂಕ್ ಅಧಿಕಾರಿ ದೀಪಿಕಾ ಕೃಷ್ಣ ಮಾಹಿತಿ ನೀಡಿದರು. ಕಲ್ಲತರು ಮಹಿಳಾ ಸ್ವಸಹಾಯ ಸಂಘದ ಮಹಿಳೆಯರಿಗೆ ಮಾಹಿತಿ ನೀಡಲಾಯಿತು. ಅಧ್ಯಕ್ಷತೆಯನ್ನು ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘದ ಗೌರವ ಸಲಹೆಗಾರ ಚೆನ್ನಯ್ಯ ಪೂಜಾರಿ, ಬಿಲ್ಲವ ಯುವ ವೇದಿಕೆ ಮಾಜಿ ಅಧ್ಯಕ್ಷ ರವಿ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಕಲ್ಪತರು ಸ್ವಸಹಾಯ ಸಂಘದ ಸೀಮಾ ವಿಜಯ ಪೂಜಾರಿ ಸ್ವಾಗತಿಸಿ, ಉಷಾ ಗಣೇಶ್ ಪೂಜಾರಿ ವಂದಿಸಿದರು. ಬಿಲ್ಲವ ಯುವ ವೇದಿಕೆ ಮುಖಂಡ ಸುರೇಶ್ ಪೂಜಾರಿ ನಿರೂಪಿಸಿದರು.