ಉಡುಪಿ, ಫೆ.14: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ವಿಶೇಷ ರೈಲು ಒದಗಿಸುವಂತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಮನವಿ ಮಾಡಿದ್ದು ಇದೀಗ ಅಧಿಕೃತ ಪ್ರಕಟಣೆಯನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ. ದಿನಾಂಕ ಫೆಬ್ರವರಿ 17ರಂದು ಮಧ್ಯಾಹ್ನ 12.30 ಗಂಟೆಗೆ ವಿಶೇಷ ರೈಲು ಉಡುಪಿಯಿಂದ ಹೊರಟು ಕುಂಭಮೇಳದತ್ತ ಪ್ರಯಾಣ ಬೆಳೆಸಲಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಯಾತ್ರಾರ್ಥಿಗಳಿಗೆ ಇದು ಬಹಳಷ್ಟು ಉಪಕಾರಿಯಾಗಿದ್ದು ಅತ್ಯಂತ ಕಡಿಮೆ ಖರ್ಚಿನಲ್ಲಿ ಕುಂಭಮೇಳಕ್ಕೆ ಹೋಗಿ ಬರಬಹುದು. ಈ ರೈಲು ಸೇವೆಯನ್ನು ಹೆಚ್ಚಿನ ಭಕ್ತಾದಿಗಳು ಉಪಯೋಗಿಸುವಂತೆ ಕೇಳಿಕೊಳ್ಳುತ್ತೇನೆ. ಫೆ.14ರಂದು ಬೆಳಿಗ್ಗೆಯಿಂದ ಟಿಕೆಟ್ ಲಭ್ಯವಿದ್ದು ರೈಲ್ವೆ ಇಲಾಖೆಯ ವೆಬ್‌ಸೈಟ್ ಅಥವಾ ಆಯಾ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ ಎಂದು ಸಂಸದ ಕೋಟ ತಿಳಿಸಿದ್ದಾರೆ.