ಕುಂದಾಪುರ, ಫೆ.12: ಮಾದಕ ವ್ಯಸನಿಗಳಿಗೆ ಸಮಾಜದಲ್ಲಿ ಬಹುಕಾಲ ಬದುಕಿಲ್ಲ. ಇಂತಹ ವಸ್ತುಗಳಿಂದ ವ್ಯಕ್ತಿಯ ನೋವು, ಸಂಕಟಗಳನ್ನು ಮರೆಯಲು ಸಾಧ್ಯವಿಲ್ಲ. ಸೃಜನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕರೂ, ಮನೋವೈದ್ಯರೂ ಆದ ಡಾ. ಪಿ. ವಿ. ಭಂಡಾರಿ ಮಾತನಾಡಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಆಂಗ್ಲ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಗಳಲ್ಲಿ ಆಯೋಜಿಸಿದ ವ್ಯಸನ ಮುಕ್ತ ಸಮಾಜ ನಿರ್ಮಿಸಲು ವಿದ್ಯಾರ್ಥಿಗಳು ಹೇಗೆ ಪಾತ್ರ ವಹಿಸಬೇಕು ಎಂಬ ಕಾರ್ಯಾಗಾರದಲ್ಲಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಉದಯವಾಣಿ ಪತ್ರಿಕೆಯ ಮುಖ್ಯ ವರದಿಗಾರರಾದ ಲಕ್ಷ್ಮೀ ಮಚ್ಚಿನ ಮಾತನಾಡುತ್ತಾ, ನಾವು ಹೇಗೆ ಇರಬೇಕು ಎಂಬುದು ನಮ್ಮ ನಿರ್ಧಾರವಾಗಬೇಕು. ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸ ನಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತದೆ ಎಂದರು. ಸಂಸ್ಥೆಯ ಅಧ್ಯಕ್ಷರೂ, ಸಂಚಾಲಕರೂ ಆದ ಬಿ. ಎಂ. ಸುಕುಮಾರ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಾಲೆ ಕೇವಲ ಪಠ್ಯ ವಿಷಯಗಳ ಬೋಧನೆಗೆ ಮಾತ್ರ ಸೀಮಿತವಲ್ಲ. ಮುಂದೆ ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಮಾದಕ ವಸ್ತುಗಳಿಗೆ ಬಲಿಯಾಗದೇ ಹೇಗೆ ಇರಬೇಕು ಎನ್ನುವುದರ ಬಗ್ಗೆ ಅರಿವಿರಬೇಕು ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ದಿವ್ಯಾ ಎಚ್. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಪ್ರಾಪ್ತಿ ಮಡಪ್ಪಾಡಿ ಸ್ವಾಗತಿಸಿ, ಶ್ರೀದೇವಿ ಮತ್ತು ಇಹಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಮರ್ಥ ವಂದಿಸಿದರು.