ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಆಯೋಜಿಸಿರುವ ಮನೆಮನೆ ಭಜನೆ- ಗ್ರಾಮ ಭಜನೆ ಕಾರ್ಯಕ್ರಮದಲ್ಲಿ 1,292 ಮನೆಗಳಲ್ಲಿ ಭಜನ ಸೇವೆ ಸಂಪನ್ನಗೊಂಡಿದೆ. ಏಪ್ರಿಲ್ 2ರಿಂದ ಆರಂಭಗೊಂಡ ಈ ಮನೆಮನೆ ಭಜನೆ-ಗ್ರಾಮ ಭಜನೆಯು ಏಪ್ರಿಲ್ 23ರವರೆಗೆ ನಡೆಯಲಿದೆ.
ನಾರಾಯಣಿ, ಶಾಂಭವಿ, ಭೈರವಿ, ಪಾರ್ವತಿ, ಕಾತ್ಯಾಯಿನಿ ಎಂಬ ಐದು ತಂಡಗಳು ದಿನಕ್ಕೆ ಒಟ್ಟು 75 ಮನೆಗಳನ್ನು ಸಂದರ್ಶಿಸಿ ಭಜನೆಗಳನ್ನು ಹಾಡುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪ್ರತಿ ತಂಡದಲ್ಲಿ ಮಹಿಳೆಯರು ಸೇರಿ 80 ವರ್ಷದವರೆಗಿನ ಭಜನಾ ಕಲಾವಿದರು ಇದ್ದಾರೆ. ಒಟ್ಟು 2,000 ಮನೆಗಳ ಗುರಿ ಇದ್ದು ಶುಕ್ರವಾರದವರೆಗೆ ಅರ್ಧಾಂಶದಷ್ಟು ಅಂದರೆ 1,292 ಮನೆಗಳಲ್ಲಿ ಭಜನ ಸೇವೆ ನಡೆದಿದೆ.
ಮನೆಗಳಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಉತ್ಸಾಹ ಕಂಡುಬಂದಿದೆ. ಉಡಿ ತುಂಬುವುದು, ಹೂವು ಸಮರ್ಪಣೆ, ಬಟ್ಟೆ ವಿತರಣೆ, ಸಾಂಪ್ರದಾಯಿಕ ತಿನಿಸು ವಿತರಣೆ ನಡೆಯುತ್ತಿದೆ. ಭಕ್ತಿ ಭಾವದಿಂದ ಭಜನಾ ತಂಡದವರನ್ನು ಮನೆಯವರು ಸ್ವಾಗತಿಸುತ್ತಿದ್ದಾರೆ. ಒಟ್ಟಾರೆ ಭಜನಾ ತಂಡದವರು ಮನೆಗಳಿಗೆ ಭೇಟಿ ನೀಡಿ ಹಾಡುವುದು ಹಬ್ಬದ ವಾತಾವರಣ ಸೃಷ್ಟಿಸಿದೆ.
ಏಪ್ರಿಲ್ 23ಕ್ಕೆ ಸಮಾರೋಪ: ಗ್ರಾಮ ಭಜನೆ ಕಾರ್ಯಕ್ರಮದ ಸಮಾರೋಪ ಏಪ್ರಿಲ್ 23ರ ಸಂಜೆ 4.30ಕ್ಕೆ ನಡೆಯಲಿದೆ. ಶ್ರೀ ಕೃಷ್ಣಮಠದಿಂದ ಕಡಿಯಾಳಿ ದೇವಸ್ಥಾನದವರೆಗೆ ಭಜನ ಮೆರವಣಿಗೆ ನಡೆಯಲಿದೆ. ಬಳಿಕ ಕಡಿಯಾಳಿ ದೇವಸ್ಥಾನದ ವಠಾರದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ವಿಶೇಷವೆಂದರೆ ಯಾರ ಮನೆಗಳಿಗೆ ಭಜನ ತಂಡಗಳು ಭೇಟಿ ನೀಡಿ ಭಜನ ಸೇವೆ ಸಲ್ಲಿಸಿದೆಯೋ ಆ ಮನೆಯವರು ಸಮಾರೋಪ ಸಮಾರಂಭದ ಭಜನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದು ಇವರು ಭಾಗವಹಿಸಲಿದ್ದಾರೆ.
ಭಜನಾ ಮಂಗಲದ ಪೋಸ್ಟರ್ ಬಿಡುಗಡೆ: ಗ್ರಾಮ ಭಜನ ಮಂಗಲೋತ್ಸವದ ಪೋಸ್ಟರ್‌ನ್ನು ಶನಿವಾರ ಬಿಗ್ ಬಾಸ್ ಖ್ಯಾತಿಯ ಹೆಸರಾಂತ ಬೈಕ್ ರೇಸರ್ ಕಡಿಯಾಳಿ ದೇವಸ್ಥಾನದ ಅರ್ಚಕ ಕುಟುಂಬದ ಸದಸ್ಯ ಅರವಿಂದ ಕೆ.ಪಿ. ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ, ಭಜನ ತಂಡಗಳ ಮುಖ್ಯಸ್ಥರಾದ ಜೀವರತ್ನ ದೇವಾಡಿಗ, ಸುಮಲತಾ ಉದಯ್, ಅಶ್ವಿನಿ ಪೈ, ಗೀತಾ ನಾಯಕ್, ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು.