ಉಡುಪಿ, ಫೆ.11: ಅಂತರ್ಜಾಲ ಬಳಕೆಯ ಸಮಯದಲ್ಲಿ ಜನ ಸಾಮಾನ್ಯರು ಜವಾಬ್ದಾರಿಯಿಂದ ಎಚ್ಚರಿಸಿ ವ್ಯವಹರಿಸಬೇಕು. ಒಂದೊಮ್ಮೆ ನಿರ್ಲಕ್ಷ್ಯ ವಹಿಸಿದಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ತಿಳಿಸಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕಿರಣ ದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜನಸಾಮಾನ್ಯರು ಆಧುನಿಕ ತಂತ್ರಜ್ಞಾನಗಳ ಮೊರೆ ಹೊಗಿ ಕ್ಷಣಾರ್ಧದಲ್ಲಿ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಆರ್ಥಿಕ ವ್ಯವಹಾರಗಳನ್ನು ಡಿಜಿಟಲ್ ಎಲೆಕ್ಟ್ರಾನಿಕ್ ಬಳಕೆಯನ್ನು ಹೆಚ್ಚು ಹೆಚ್ಚು ಮಾಡುತ್ತಿದ್ದಾರೆ. ಇಂತಹ ವ್ಯವಹಾರಗಳನ್ನು ಮಾಡುವಾಗ ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಿ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಪ್ರತಿದಿನ ಹೊಸ ಹೊಸ ರೂಪದಲ್ಲಿ ಸೈಬರ್ ಅಪರಾಧ ಪ್ರಕರಣಗಳೂ ಸಹ ನಡೆಯುತ್ತಿರುವುದು ಕೇಳಿ ಬರುತ್ತಿದೆ ಎಂದರು.
ಜನಸಾಮಾನ್ಯರು ಅಲ್ಪ ಅವಧಿಯಲ್ಲಿಯೇ ಹೆಚ್ಚಿನ ಹಣವನ್ನು ದ್ವಿಗುಣಗೊಳಿಸುವ ಆಸೆಯಿಂದ ಹಣದ ಹೂಡಿಕೆಗಳನ್ನು ಕಂಪನಿಗಳ ಪೂರ್ವಾಪರ ಮಾಹಿತಿಯನ್ನು ಹೊಂದದೇ ತೊಡಗಿಸಿ ಆರಂಭದಲ್ಲಿ ಹೆಚ್ಚಿನ ಹಣ ಗಳಿಸಿ, ಇತರರಿಗೂ ಹೂಡಿಕೆ ಮಾಡಲು ಪ್ರಚಾರಪಡಿಸುವುದರೊಂದಿಗೆ ಹೆಚ್ಚಿನ ಹಣವನ್ನು ವ್ಯಯಿಸಿ, ಹಣ ಕಳೆದುಕೊಂಡ ನಿರ್ದೇಶನಗಳು ನಮ್ಮ ಕಣ್ಣು ಮುಂದೆ ಇವೆ. ಇವುಗಳ ಬಗ್ಗೆ ಜಾಗೃತಿ ವಹಿಸಿದಾಗ ಮಾತ್ರ ಆರ್ಥಿಕ ನಷ್ಟದಿಂದ ಪಾರಾಗಲು ಸಾಧ್ಯ ಎಂದರು.
ವಿಧಾನಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಮಾತನಾಡಿ, ಸೈಬರ್ ವಂಚಕರು ಬ್ಯಾಂಕ್ ಖಾತೆಗಳಲ್ಲಿ ಹೆಚ್ಚಿನ ಹಣ ಹೊಂದಿರುವ ಸರ್ಕಾರಿ ನೌಕರರು ಹಾಗೂ ಇತರೆ ಶ್ರೀಮಂತ ವ್ಯಕ್ತಿಗಳ ಹಣವನ್ನು ಲೂಟಿಮಾಡಲು ಅವರ ದತ್ತಾಂಶಗಳನ್ನು ಇಂಟರ್‌ನೆಟ್ ಬಳಕೆಯ ಮೂಲಕ ಸರಳವಾಗಿ ಸಂಗ್ರಹಿಸಿ, ಮೋಸ ಮಾಡಲು ಸಂಚು ರೂಪಿಸುತ್ತಾರೆ. ಈ ಬಗ್ಗೆ ಜನಸಾಮಾನ್ಯರು ಜಾಗೃತಿ ವಹಿಸಬೇಕು. ಹಠಾತ್ ಆಗಿ ಮೋಸ ಮಾಡುವ ಉದ್ದೇಶದಿಂದ ಕೆಲವೊಂದು ಸುಳ್ಳು ಮಾಹಿತಿಗಳನ್ನು ಹಂಚಿಕೊಂಡು ಉದ್ರೇಕಿಸುವುದರೊಂದಿಗೆ ಭಯ ಹುಟ್ಟಿಸಿ ಹಣ ಪಡೆಯಲು ಮುಂದಾಗುತ್ತಾರೆ. ಇದಕ್ಕೆ ಒತ್ತು ನೀಡಬಾರದು ಎಂದು ತಮ್ಮ ಸ್ವಂತ ಅನುಭವಗಳ ನಿರ್ದೇಶನ ನೀಡುವುದರೊಂದಿಗೆ ಮನಮುಟ್ಟುವ ರೀತಿಯಲ್ಲಿ ಮಾಹಿತಿ ಹಂಚಿಕೊಂಡರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸೈಬರ್ ಕ್ರೈಂ ಪ್ರಕರಣಗಳಲ್ಲಿ ಕಳೆದುಕೊಂಡ ಹಣವನ್ನು ಮತ್ತೆ ಪಡೆಯಲು ಹಾಗೂ ಅಂತಹ ಪ್ರಕರಣಗಳನ್ನು ತನಿಖೆ ಮಾಡುವುದು ಕಷ್ಟಸಾಧ್ಯ. ಆನ್‌ಲೈನ್ ವಂಚಕರು ಮೊದಲು ನಮ್ಮ ನಂಬಿಕೆಯನ್ನು ಗಳಿಸಲು ಪ್ರಯತ್ನಿಸಿ, ಮೋಸ ಮಾಡುತ್ತಾರೆ. ಎಷ್ಟೇ ಎಚ್ಚರವಿದ್ದರೂ ಕಷ್ಟ. ಹಣಕಾಸಿನ ವ್ಯವಹಾರಗಳನ್ನು ಮಾಡುವಾಗ ಜವಾಬ್ದಾರಿಯುತವಾಗಿ ಮಾಡಬೇಕು ಎಂದರು. ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ. ಅರುಣ್ ಕೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಾಂಪ್ರದಾಯಿಕ ಮೋಸದ ಅಪರಾಧಗಳಿಗಿಂತ ಕುಳಿತಲ್ಲಿಯೇ ಇಂಟರ್‌ನೆಟ್ ಬಳಕೆಯಿಂದ ಸೈಬರ್ ಅಪರಾಧಗಳನ್ನು ಮಾಡುವುದರೊಂದಿಗೆ ಹೆಚ್ಚಿನ ಹಣ ಗಳಿಕೆ ಮಾಡುತ್ತಿದ್ದಾರೆ. ಸೈಬರ್ ಅಪರಾಧದಲ್ಲಿ ಶೇ. 80 ರಷ್ಟು ಹಣಕಾಸಿನ ಮೋಸಗೊಳಿಸುವಿಕೆ ಹೆಚ್ಚು ಇವೆ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಅಪರಾಧದಿಂದ 4 ಕೋಟಿ ಹಣ ಸಾರ್ವಜನಿಕರು ಕಳೆದುಕೊಂಡರೆ, ಸೈಬರ್ ಅಪರಾಧದಲ್ಲಿ 44 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿರುತ್ತಾರೆ ಎಂದ ಅವರು, ಜನರು ಆರ್ಥಿಕ ವಹಿವಾಟು ಮಾಡುವಾಗ ಮೂಲಭೂತ ಅಂಶಗಳ ಬಗ್ಗೆ ಎಚ್ಚರವನ್ನು ವಹಿಸುವುದು ಅತ್ಯಂತ ಅವಶ್ಯ ಎಂದರು.
ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್ ಮಾತನಾಡಿದರು. ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ ಹಾಗೂ ಬೆಂಗಳೂರು ಎನ್.ಐ.ಸಿ ಯ ಬಾಲಚಂದ್ರ ಸೈಬರ್ ಪ್ರಕರಣಗಳಾಗದಂತೆ ಎಚ್ಚರ ವಹಿಸುವ ಕುರಿತು ಮಾಹಿತಿ ನೀಡಿದರು. ಎನ್.ಐ.ಸಿ ಅಧಿಕಾರಿ ಉಮಾಮಹೇಶ್ವರಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಡಯಟ್ ಉಪನ್ಯಾಸಕ ಡಾ. ಅಶೋಕ್ ಕಾಮತ್ ಸ್ವಾಗತಿಸಿ, ನಿರೂಪಿಸಿದರು.