ಉಡುಪಿ, ಫೆ.10: ಉಡುಪಿಯ ಸಂತೆಕಟ್ಟೆಯಲ್ಲಿರುವ ಧನ್ವಂತರಿ ನರ್ಸಿಂಗ್ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಮೂಳೆ ರೋಗಗಳ ಘಟಕದ ಮುಖ್ಯಸ್ಥರಾದ ಡಾ. ಮೋನಪ್ಪ ನಾಯ್ಕ್ ಪದವಿ ಪ್ರದಾನ ಮಾಡಿ, ಶಿಕ್ಷಣವು ನಿಂತ ನೀರಾಗದೆ ಜೀವನದುದ್ದಕ್ಕೂ ಬೇರೆ ಬೇರೆ ವಿಷಯಗಳ ಕುರಿತು ಜ್ಞಾನವನ್ನು ಸಂಪಾದಿಸುವಂತೆ ಜೊತೆಗೆ ರೋಗಿಗಳೊಂದಿಗೆ ಉತ್ತಮ ಸಂವಹನ ಕಾಯ್ದುಕೊಂಡು ಹೆತ್ತವರ ಹೆಸರನ್ನು ಉಳಿಸಿ ಕೀರ್ತಿವಂತರಾಗಿ ಬಾಳಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು ಹಾಗೂ ಪ್ರಶಾಂತವಾದ ವಾತಾವರಣದಲ್ಲಿ ಮೌಲ್ಯಯುತ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ ಡಾ. ಉಮೇಶ್ ಪ್ರಭು ವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕರಾದ ಟಿ ವಿ ರಾವ್ ಹೆಸರಿನಲ್ಲಿ ನೀಡುವ ಪ್ರತಿಷ್ಠಿತ ಟಿ ವಿ ರಾವ್ ಪ್ರಶಸ್ತಿಯನ್ನು ವಾದಿರಾಜ ಕುಂದರ್ ಮಟ್ಟು ಅವರಿಗೆ ಪ್ರದಾನ ಮಾಡಲಾಯಿತು. ಸಂಸ್ಥೆಯಲ್ಲಿ ಹತ್ತು ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿದ ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಉದಯ್ ಕುಮಾರ್ ಸ್ವಾಗತಿಸಿದರು. ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಪ್ರೊ. ಲತಾ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ಜರಗಿತು.