ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ, ವೈದ್ಯಕೀಯ ಪ್ರಕೋಷ್ಠ ಉಡುಪಿ, ರೋಟರಿ ಕ್ಲಬ್ ಉಡುಪಿ ಮಣಿಪಾಲ ಮತ್ತು ಭಾರತೀಯ ದಂತ ವೈದ್ಯಕೀಯ ಮಂಡಳಿ ಇವರ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಭಾನುವಾರ ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು.
ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ನಮ್ಮ ದೈಹಿಕ ಮಾನಸಿಕ ಆರೋಗ್ಯ ಅತ್ಯಂತ ಪ್ರಾಮುಖ್ಯ. ಸೈಕಲ್ ಸವಾರಿ ಮಾಡುವ ಮೂಲಕ ನಮ್ಮ ದೇಹಕ್ಕೆ ಉತ್ತಮ ವ್ಯಾಯಾಮ ನೀಡಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಫಿಟ್ ಇಂಡಿಯಾ ಕನಸು ನನಸಾಗಬೇಕಾದರೆ ನಾವೆಲ್ಲರೂ ಫಿಟ್ ಇರಬೇಕು. ಈ ನಿಟ್ಟಿನಲ್ಲಿ ಸೈಕಲ್ ಜಾಥಾ ಬಹಳ ಅರ್ಥಪೂರ್ಣವಾಗಿದೆ ಎಂದರು. ರೋಟರಿ ಜಿಲ್ಲಾ ನಿಯೋಜಿತ ಜಿಲ್ಲಾ ಗವರ್ನರ್ ಡಾ. ಜೆ. ಗೌರಿ ಶುಭ ಹಾರೈಸಿದರು.
ಡಿ.ಹೆಚ್.ಒ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನಾ, ಡಾ. ಸುರೇಶ್ ಶೆಣೈ, ವೈದ್ಯಕೀಯ ಪ್ರಕೋಷ್ಠ ರಾಜ್ಯ ಕಾರ್ಯಕಾರಿ ಸದಸ್ಯ ಡಾ. ವಿಜಯೀಂದ್ರ ವಸಂತ್, ಸಂಚಾಲಕ ಡಾ. ರಾಮಚಂದ್ರ ಕಾಮತ್, ಸಹಸಂಚಾಲಕ ಡಾ. ವಿದ್ಯಾಧರ ಶೆಟ್ಟಿ, ಡಾ. ರೋಶನ್ ಮುಂತಾದವರಿದ್ದರು.
ಮೇ. ರಾಧಾಕೃಷ್ಣ ನಿರೂಪಿಸಿದರು. ಈ ಸಂದರ್ಭದಲ್ಲಿ ವಿಶಿಷ್ಟವಾದ ಆರೋಗ್ಯದ ಕುರಿತು ರಸಪ್ರಶ್ನೆ ನಡೆಯಿತು. ಸುಮಾರು 10 ಕಿ.ಮೀ ದೂರ ನಡೆದ ಈ ಜಾಥಾದಲ್ಲಿ ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಒ ಸ್ವತ: ಸೈಕಲ್ ಸವಾರಿ ನಡೆಸಿ ಗಮನ ಸೆಳೆದರು.