ಉಡುಪಿ, ಫೆ.5: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಐವೈಸಿ ಸಭಾಂಗಣದಲ್ಲಿ ಸಂಸ್ಕೃತಿ ಉತ್ಸವ 2025 ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ಪ್ರಾಯೋಜಿತ ಶಾರದಾ ಕೃಷ್ಣ ಪುರಸ್ಕಾರ 2025 ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಇವರಿಗೆ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಜಿಲ್ಲಾ ಕಮಿಷನರ್ ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿಯು ಕರ್ನಾಟಕದಲ್ಲಿಯೇ ಸಾಂಸ್ಕೃತಿಕ ನಗರಿ ಎಂಬ ಹೆಸರು ಪಡೆದಿದೆ. ಇಲ್ಲಿ ನಡೆಯುವಷ್ಟು ಕನ್ನಡ ಪರ ಕಲೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳು ಬೇರೆಲ್ಲೂ ನಡೆಯಲು ಸಾಧ್ಯವಿಲ್ಲ. ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ಕಳೆದ ಐದು ವರ್ಷಗಳಿಂದ ತನ್ನ ಅತ್ಯುತ್ತಮ ಕಾರ್ಯಗಳಿಂದ ರಾಜ್ಯಮಟ್ಟದಲ್ಲಿ ಗುರುತಿಸುವ ಸಂಸ್ಥೆಯಾಗಿ ಹೊರಹೊಮ್ಮಿರುವುದು ಅಭಿನಂದನೀಯ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೀವನ ರಾಮ್ ಸುಳ್ಯ, ನಾನು ರಂಗಭೂಮಿಯಲ್ಲಿ ಈ ಸಾಧನೆ ಮಾಡಲು ನನ್ನ ಹೆತ್ತವರು ಮುಖ್ಯ ಕಾರಣ. ನಾಟಕದಲ್ಲಿ ಕೇವಲ ಪಾತ್ರ ಮಾಡುವುದನ್ನು ಮಾತ್ರ ಕಲಿಸಿಕೊಡದೆ, ಜೀವನದಲ್ಲಿ ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ಕೂಡ ರಂಗಭೂಮಿ ಹೇಳಿಕೊಡುತ್ತದೆ ಹೀಗಾಗಿ ರಂಗಭೂಮಿ ಕಲಾವಿದ ಸಮಾಜದಲ್ಲಿ ಎಷ್ಟೇ ಕಷ್ಟ ಬಂದರೂ ಸಮರ್ಥವಾಗಿ ಜೀವನ ಸಾಗಿಸುವ ಧೈರ್ಯವನ್ನು ಹೊಂದಿದ್ದಾನೆ ಎಂದರು.
ಮುಖ್ಯ ಅತಿಥಿ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎನ್ ಎಂ ಹೆಗಡೆ ಮಾತನಾಡಿ, ಮನುಷ್ಯ ವಿವಿಧ ರೀತಿಯ ಕಲಾ ಚಟುವಟಿಕೆಯಲ್ಲಿ ಅಥವಾ ಉತ್ತಮ ಹವ್ಯಾಸದಲ್ಲಿ ತೊಡಗಿಕೊಂಡಾಗ ಸಾಮಾಜಿಕವಾಗಿ ಬದುಕಿ ಕೊಂಡಾಗ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದು. ರಂಗಭೂಮಿಯು ಕೂಡ ಸಮಾಜದ ನೈಜ್ಯ ಚಿತ್ರಣವನ್ನು ಜನರಿಗೆ ತೋರಿಸುವ ಉತ್ತಮ ಮಾಧ್ಯಮವಾಗಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ನಾಟಕವು ಸಮಾಜದಲ್ಲಿ ಕ್ರಾಂತಿಯನ್ನು ಮಾಡುವ ಶಕ್ತಿ ಹೊಂದಿದೆ. ಬಿ.ವಿ ಕಾರಂತ, ಕೋಟ ಶಿವರಾಮ ಕಾರಂತರಂತಹ ಅನೇಕ ಹಿರಿಯ ವಿದ್ವಾಂಸರು ರಂಗಭೂಮಿಗೆ ಹೊಸ ಆಯಾಮವನ್ನೇ ತಂದು ಕೊಟ್ಟರು ಇಂದು ನಾಟಕ ಕೇವಲ ಮನರಂಜನೆಯ ಭಾಗವಲ್ಲದೆ ಸಮಾಜದ ಪರಿವರ್ತನೆಯ ದಾರಿಯಾಗಿದೆ ಎಂದರು. ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ವಿಶ್ವಸ್ಥರಾದ ಎಂ ಸೂರ್ಯನಾರಾಯಣ ಅಡಿಗ, ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ. ಸುರೇಶ್ ಶೆಣ್ಣಿ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ನಾಗೇಶ್ ಭಟ್ ಮುಂತಾದವರು ಶುಭ ಹಾರೈಸಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊಫೆಸರ್ ಶಂಕರ್, ಕಾರ್ಯದರ್ಶಿ ಶಿಲ್ಪಾ ಜೋಶಿ, ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಉಪಸ್ಥಿತರಿದ್ದರು. ಡಾ. ಭಾರ್ಗವಿ ಐತಾಳ ನಿರೂಪಿಸಿದರು. ಉಪಾಧ್ಯಕ್ಷ ನಾಗರಾಜ್ ಹೆಬ್ಬಾರ್ ಸ್ವಾಗತಿಸಿದರು. ಸಂಚಾಲಕ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದರು. ಸಂಧ್ಯಾ ಶೆಣೈ ಸನ್ಮಾನ ಪತ್ರ ವಾಚಿಸಿದರು. ಶಿಲ್ಪಾ ಜೋಷಿ ವಂದಿಸಿದರು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ನಗದಿನೊಂದಿಗೆ ಪ್ರಶಸ್ತಿ ಫಲಕ ಒಳಗೊಂಡಿದೆ.
ನಂತರ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡಬಿದ್ರೆ ಇವರಿಂದ ವೈದೇಹಿ ರಚನೆಯ ಜೀವನರಾಂ ಸುಳ್ಯ ನಿರ್ದೇಶನದ ನಾಯಿಮರಿ ನಾಟಕ ಪ್ರದರ್ಶನಗೊಂಡಿತು.