ಉಡುಪಿ, ಫೆ.4: ಯೋಗದಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.
ರಥಸಪ್ತಮಿ ಅಂಗವಾಗಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಹಾಗೂ ಶ್ರೀಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ರಾಜಾಂಗಣದಲ್ಲಿ ನಡೆದ ಸಾಮೂಹಿಕ ಸೂರ್ಯನಮಸ್ಕಾರ ಹಾಗೂ ಯೋಗ ಶಿಕ್ಷಣ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಒತ್ತಡದ ಬದುಕಿನ ಜಂಜಾಟಗಳನ್ನು ಕಡಿಮೆ ಮಾಡಲು ಯೋಗ ಪೂರಕ. ಅದನ್ನು ಶ್ರೀಕೃಷ್ಣನೂ ಗೀತೆಯಲ್ಲಿ ಸಾರಿದ್ದಾನೆ. ನಿತ್ಯವೂ ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಬ್ರಹ್ಮಗಿರಿ ಶ್ರೀಕೃಷ್ಣ ಯೋಗ ಕೇಂದ್ರದ ಅಧ್ಯಕ್ಷ ಅಮಿತ್ ಶೆಟ್ಟಿ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಪಿ.ವಿ ಭಟ್, ಕ್ರೀಡಾ ಭಾರತಿ ಯೋಗ ಸಮಿತಿಯ ವಿದ್ಯಾ ಸನಿಲ್, ಪತಂಜಲಿ ಯೋಗ ಸಮಿತಿಯ ಸರೋಜ ಮತ್ತು ಭವಾನಿ, ನಗರ ಸಂಯೋಜಕ ರಮೇಶ ಶೇರಿಗಾರ್, ರಾಜ್ಯ ಸಂಯೋಜಕ ಶೇಖರ ಶೆಟ್ಟಿ ಮತ್ತು ಮಹಿಳಾ ಸಮಿತಿಯ ಲಲಿತಾ ಕೆದ್ಲಾಯ ಇದ್ದರು. ನಗರ ಪ್ರಶಿಕ್ಷಣ ಚಿಂತನಕೂಟ ಪ್ರಮುಖರಾದ ಪ್ರೇಮ ನಿರೂಪಿಸಿದರು. ಬಳಿಕ ಸಾಮೂಹಿಕ ಸೂರ್ಯ ನಮಸ್ಕಾರ, ವಿವಿಧ ಯೋಗಾಸನಗಳನ್ನು ನಡೆಸಲಾಯಿತು. ಲೋಕಕಲ್ಯಾಣಾರ್ಥವಾಗಿ ಆದಿತ್ಯಹೃದಯ ಹೋಮ ನಡೆಸಲಾಯಿತು. ರಥ ಸಪ್ತಮಿ ಅಂಗವಾಗಿ ಉಡುಪಿ ಕೃಷ್ಣನನ್ನು ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣನನ್ನು `ಧನ್ವಂತ್ರಿಯಾಗಿ ಗೋಕುಲಚಂದ್ರ ಅಲಂಕಾರ’ ಮಾಡಿದ್ದರು.