ಉಡುಪಿ, ಫೆ.2: 12 ನೇ ಶತಮಾನದ ಪೂರ್ವದಲ್ಲಿ ಬೇರೂರಿದ್ದ ಸಾಮಾಜಿಕ ಶೋಷಣೆ, ಪಿಡುಗು, ದೌರ್ಜನ್ಯ, ಜಾತಿ ತಾರತಮ್ಯ, ಅಸಮಾನತೆ, ಮೂಢನಂಬಿಕೆ ಮತ್ತು ಶೋಷಣೆಯನ್ನು ತೊರೆದು ಹಾಕುವಲ್ಲಿ ಹಾಗೂ ಸಮಾಜವನ್ನು ಸುಧಾರಣೆಗೆ ತರುವಲ್ಲಿ ಮಡಿವಾಳ ಮಾಚೀದೇವರ ವಚನಗಳು ಹೆಚ್ಚು ಪ್ರಭಾವ ಬೀರಿದ್ದವು ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ಶನಿವಾರ ನಗರದ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ಇಲ್ಲಿನ ಜನತಾ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
12 ನೇ ಶತಮಾನದ ಶಿವರಶರಣೆಯರು ಹಲವಾರು ವಚನಗಳನ್ನು ರಚಿಸುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಅವರಲ್ಲಿ ಮಾಚೀದೇವ ಕೂಡ ಪ್ರಮುಖರು. ಕಾಯಕನಿಷ್ಠೆಗೆ ಹೆಸರುವಾಸಿಯಾಗಿದ್ದ ಇವರು, ಸಮಾಜದ ಏಳಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮದಡಿ ಸಾಲಯೋಜನೆ, ಸಹಾಯಧನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಆರ್ಥಿಕವಾಗಿ ಶಕ್ತಿ ತುಂಬುತ್ತಿವೆ. ಯಾವುದೇ ಸಮುದಾಯ ವರ್ಗದವರಾದರೂ ಸಮಾಜದಲ್ಲಿ ಯಶಸ್ಸು ಕಾಣಬೇಕಾದರೆ, ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರಬೇಕು ಎಂದ ಅವರು, ಶರಣರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಅವರ ಆಶಯಗಳು ದಾರಿದೀಪವಾಗಬೇಕು ಎಂದರು. ರಜಕ ಯಾನೆ ಮಡಿವಾಳ ಸಂಘದ ಜಿಲ್ಲಾ ಅಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ಮಾತನಾಡಿ, ಮಡಿವಾಳ ಮಾಚೀದೇವರು ರಚಿಸಿದ ವಚನಗಳು ಸಮಾಜದಲ್ಲಿನ ಮೌಢ್ಯವನ್ನು ಹೋಗಲಾಡಿಸಲು ಸಹಕಾರಿಯಾಗಿವೆ ಎಂದರು.
ಹಿರಿಯಡ್ಕದ ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ಉಪನ್ಯಾಸ ನೀಡಿ, ಮಾತನಾಡಿ, ಬಸವಣ್ಣನವರ ಸಮಕಾಲೀನವರಲ್ಲಿ ಮಡಿವಾಳ ಮಾಚೀದೇವರು ಒಬ್ಬರು. 12 ನೇ ಶತಮಾನವನ್ನು ಕ್ರಾಂತಿಯುಗ ಎನ್ನಲಾಗುತ್ತದೆ. ಕಲ್ಯಾಣ ನಾಡಿನಲ್ಲಿ ಕ್ರಾಂತಿ ಮಾಡಿದ ಇವರು ಹಲವಾರು ವಚನ ಸಾಹಿತ್ಯಗಳನ್ನು ರಚಿಸಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸದ ಮಾತನ್ನು ಅನುಸರಿಸುತ್ತಾ, ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಸಮಾಜಕ್ಕೆ ಸಾರಿದ ಇವರು, ಅನುಭವ ಮಂಟಪದಲ್ಲಿ ಶಿವಶರಣೆಯರ ವಸ್ತ್ರ ಮಡಿಗೊಳಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಚನ ಸಾಹಿತ್ಯಗಳನ್ನು ನಾಶ ಪಡಿಸುವ ಸಂದರ್ಭದಲ್ಲಿ ಅವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಮಕ್ಕಳು ತಮ್ಮ ಜೀವನದಲ್ಲಿ ನಯ, ವಿನಯ ಹಾಗೂ ವಿಧೇಯತೆಗಳನ್ನು ರೂಢಿಸಿಕೊಳ್ಳಬೇಕು. ಶಿವಶರಣೆಯರು ಹಾಗೂ ಮಹನೀಯರುಗಳ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿದ್ದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಮಡಿವಾಳ ಸಮುದಾಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆಗೈದ ತನಿಷ್ ವಿ ಗುಜರನ್ ಹಿರಿಯಡ್ಕ, ಉಮೇಶ್ ಸಾಲಿಯಾನ್ ಹಿರಿಯಡ್ಕ, ಸಿರಿ ಎಸ್ ಮಡಿವಾಳ ಹೇರಾಡಿ, ಗಣೇಶ್ ಎಸ್ ಸಾಲಿಯಾನ್ ಹಾಗೂ ಪ್ರಜ್ವಲ್ ಮಡಿವಾಳ ಕೋಟ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಡಿಡಿಪಿಯು ಮಾರುತಿ, ಮಡಿವಾಳ ಸಮಾಜದ ಪದಾಧಿಕಾರಿಗಳು, ಕಾಲೇಜಿನ ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾಗರಾಜ್ ವಂದಿಸಿದರು.