ಕೋಟ, ಜ.30: ಪಂಚವರ್ಣ ಸಂಘಟನೆ ಕಾರ್ಯಕ್ರಮಗಳು ಆ ಸಂಸ್ಥೆಯನ್ನು ಬಹು ಎತ್ತರಕ್ಕೆ ಕೊಂಡ್ಯೊಯ್ದಿದೆ ಎಂದು ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಎಂ.ವಿಷ್ಣುಮೂರ್ತಿ ಮಯ್ಯ ಹೇಳಿದರು. ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಕೋಟ ಇದರ ನೂತನ ಪದಾಧಿಕಾರಿಗಳ ಪದಪ್ರದಾನ, ಸಾಧಕರಿಗೆ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಸಂಘಸಂಸ್ಥೆಗಳ ಕಾರ್ಯವೈಖರಿಗಳು ಜನಮಾನಸದಲ್ಲಿ ನೆಲೆನಿಲ್ಲುವಂತೆ ಮಾಡಬೇಕು. ಊರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಸಂಘಸಂಸ್ಥೆಗಳ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಸಾಧಕರನ್ನು ಗುರುತಿಸುವ ಮನೋಭಾವ ಶ್ರೇಷ್ಠವಾಗಿದೆ ಇದೇ ರೀತಿ ಇನ್ನಷ್ಟು ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿ ಎಂದರು. ಇದೇ ವೇಳೆ ನೂತನ ಅಧ್ಯಕ್ಷ ಮನೋಹರ್ ಪೂಜಾರಿಯವರಿಗೆ ನಿರ್ಗಮಿತ ಅಧ್ಯಕ್ಷ ಅಜಿತ್ ಆಚಾರ್ ದಾಖಲೆಗಳನ್ನು ಹಸ್ತಾಂತರಿಸುವ ಮೂಲಕ ಹೊಸ ಅಧ್ಯಕ್ಷರಿಗೆ ಶುಭ ಕೋರಿದರು. ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೇಖಿ ಚಿಕಿತ್ಸಾ ತಜ್ಞ ಕಾರ್ಕಡ ನಾರಾಯಣ ಆಚಾರ್, ರಕ್ತದಾನಿ ದಿನೇಶ್ ಕಾಂಚನ್ ಬೆಟ್ಟಿನಮನೆ ಇವರುಗಳಿಗೆ ಗೌರವ ಸಮ್ಮಾನ ನಡೆಯಿತು. ಅಧ್ಯಕ್ಷತೆಯನ್ನು ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೌರವ ಸಲಹೆಗಾರರಾದ ಮಣೂರು ಭಾಸ್ಕರ್ ಶೆಟ್ಟಿ, ಭಾರತಿ ವಿ ಮಯ್ಯ, ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪಂಚವರ್ಣ ಯುವಕ ಮಂಡಲದ ನಿರ್ಗಮಿತ ಅಧ್ಯಕ್ಷ ಅಜಿತ್ ಆಚಾರ್, ನೂತನ ಕಾರ್ಯದರ್ಶಿ ನಿತಿನ್ ಕುಮಾರ್ ಕೋಟ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಸನ್ಮಾನ ಪತ್ರ ವಾಚಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ಸಂಯೋಜಿಸಿದರು. ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.